ಭಾರತದೊಂದಿಗೆ ವ್ಯಾಪಾರ ಸಂಬಂಧ ಮರುಸ್ಥಾಪನೆಗೆ ಆದ್ಯತೆ : ಪಾಕಿಸ್ತಾನ
Update: 2024-03-24 16:55 GMT
ಇಸ್ಲಮಾಬಾದ್: ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಮರುಸ್ಥಾಪಿಸುವುದನ್ನು ಪಾಕಿಸ್ತಾನ `ಗಂಭೀರವಾಗಿ' ಪರಿಗಣಿಸಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮುಹಮ್ಮದ್ ಇಷಾಕ್ ದಾರ್ ಹೇಳಿದ್ದಾರೆ.
2019ರ ಆಗಸ್ಟ್‍ನಿಂದ ಅಮಾನತುಗೊಂಡಿರುವ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಮರುಸ್ಥಾಪಿಸುವ ಬಗ್ಗೆ ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಲಿದೆ. ಭಾರತದೊಂದಿಗೆ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸಲು ಪಾಕಿಸ್ತಾನದ ವ್ಯಾಪಾರ ಸಮುದಾಯ ಉತ್ಸುಕವಾಗಿದೆ ಎಂದು ದಾರ್ ಹೇಳಿರುವುದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ. ವಿದೇಶಾಂಗ ಸಚಿವರ ಈ ಹೇಳಿಕೆ ಪಾಕಿಸ್ತಾನದ ರಾಜತಾಂತ್ರಿಕ ನಿಲುವಿನಲ್ಲಿ ಸಂಭಾವ್ಯ ಬದಲಾವಣೆಯ ಸುಳಿವು ನೀಡಿದೆ. ಭಾರತವು ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿರುವುದನ್ನು ಪಾಕಿಸ್ತಾನ ಆಕ್ಷೇಪಿಸಿದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ.