ರಶ್ಯದೊಂದಿಗೆ ಸಂಪರ್ಕ | 4 ಸುದ್ಧಿಸಂಸ್ಥೆಗಳಿಗೆ ಇಯು ನಿಷೇಧ
ಬ್ರಸೆಲ್ಸ್: ರಶ್ಯದೊಂದಿಗೆ ಸಂಪರ್ಕವಿರುವ 4 ಮಾಧ್ಯಮ ಸಂಸ್ಥೆಗಳ ಪ್ರಸರಣವನ್ನು ನಿಷೇಧಿಸಿರುವುದಾಗಿ ಯುರೋಪಿಯನ್ ಯೂನಿಯನ್ ಶುಕ್ರವಾರ ಹೇಳಿದೆ.
`ದಿ ವಾಯ್ಸ್ ಆಫ್ ಯುರೋಪ್, ಆರ್‍ಐಎ ನೊವೋಸ್ತಿ ನ್ಯೂಸ್‍ಏಜೆನ್ಸಿ, ಇಝ್ವೆಸ್ಟಿಯಾ ಮತ್ತು ರೊಸ್ಸಿಸ್ಕಯ ಗಝೆಟ್ ದಿನಪತ್ರಿಕೆಗಳ ಪ್ರಸಾರವನ್ನು ನಿಷೇಧಿಸಲಾಗಿದೆ. ಈ ಸುದ್ಧಿಸಂಸ್ಥೆಗಳು ಉಕ್ರೇನ್ ವಿರುದ್ಧದ ರಶ್ಯದ ಆಕ್ರಮಣಕಾರಿ ಯುದ್ಧದ ಪರವಾಗಿ ಅಭಿಪ್ರಾಯ ಮೂಡಿಸಲು ಮತ್ತು ಯುದ್ಧವನ್ನು ಬೆಂಬಲಿಸುವ ಸುದ್ಧಿಗಳನ್ನು ಪ್ರಸಾರ ಮಾಡುತ್ತಿದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಯುರೋಪಿಯನ್ ಕೌನ್ಸಿಲ್ ಹೇಳಿದೆ.
ಈ ನಿಷೇಧವು 2022ರಿಂದ ಉಕ್ರೇನ್ ಮೇಲೆ ರಶ್ಯ ನಡೆಸುತ್ತಿರುವ ಪೂರ್ಣಪ್ರಮಾಣದ ಆಕ್ರಮಣದ ವಿರುದ್ಧ ಜಾರಿಗೊಳಿಸಲು ಯೋಜಿಸಿರುವ 14ನೇ ನಿರ್ಬಂಧ ಪ್ಯಾಕೇಜ್‍ನ ಭಾಗವಾಗಿದೆ. ರಶ್ಯದ ಸರಕಾರಿ ಸ್ವಾಮ್ಯದ `ರಶ್ಯ ಟುಡೆ ಮತ್ತು ಸ್ಪುಟ್ನಿಕ್' ವಿರುದ್ಧ ಈ ಹಿಂದೆಯೇ ನಿರ್ಬಂಧ ಜಾರಿಗೊಂಡಿದೆ. ಯುರೋಪಿಯನ್ ಯೂನಿಯನ್ ಕ್ರಮಕ್ಕೆ ಮಿಂಚಿನ ವೇಗದಲ್ಲಿ ಮತ್ತು ಪಾಶ್ಚಿಮಾತ್ಯರಿಗೆ ತೀವ್ರ ನೋವುಂಟು ಮಾಡುವ ರೀತಿಯಲ್ಲಿ ಪ್ರತಿಕ್ರಮ ಕೈಗೊಳ್ಳಲಿದ್ದೇವೆ' ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಪ್ರತಿಕ್ರಿಯಿಸಿದ್ದಾರೆ.