ಇಸ್ರೇಲ್‍ಗೆ ಬೆಂಬಲ ಮುಂದುವರಿಕೆ | ಅಮೆರಿಕ ಪುನರುಚ್ಛಾರ
ವಾಷಿಂಗ್ಟನ್: ಅಮೆರಿಕದ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ವಿಳಂಬವಾಗಿರುವ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವಂತೆಯೇ, ಹಮಾಸ್ ಮತ್ತು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸುವ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ಮುಂದುವರಿಸುವುದಾಗಿ ಅಮೆರಿಕ ಪುನರುಚ್ಚರಿಸಿದೆ.
ಇಸ್ರೇಲ್‍ನ ಉತ್ತರದ ಗಡಿಯಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಪಡೆಯೊಂದಿಗೆ ಮತ್ತೊಂದು ಯುದ್ಧ ನಡೆಸಲು ತನ್ನ ಪಡೆ ಸನ್ನದ್ಧಗೊಂಡಿದೆ ಎಂದು ಇಸ್ರೇಲ್ ಸೇನೆ ಘೋಷಿಸಿರುವಂತೆಯೇ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಬಿಕ್ಕಟ್ಟು ಉಲ್ಬಣಿಸುವ ಆತಂಕ ಮೂಡಿದೆ.
ಈ ಮಧ್ಯೆ, ಈ ವಾರ ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್‍ನ ಉನ್ನತ ಮಟ್ಟದ ನಿಯೋಗ ಅಲ್ಲಿ ಸರಣಿ ಸಭೆಗಳಲ್ಲಿ ಪಾಲ್ಗೊಂಡಿದೆ. ಕಾರ್ಯತಂತ್ರ ವ್ಯವಹಾರಗಳ ಸಚಿವ ರಾನ್ ಡೆರ್ಮರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ತಸಾಚಿ ಹನೆಬಿ ಮತ್ತಿತರ ಅಧಿಕಾರಿಗಳಿದ್ದ ನಿಯೋಗ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಶ್ವೇತಭವನದ ಮಧ್ಯಪ್ರಾಚ್ಯ ವ್ಯವಹಾರಗಳ ಸಮನ್ವಯಾಧಿಕಾರಿ ಬ್ರೆಟ್ ಮೆಕ್‍ಗುರ್ಕ್ ಜತೆ ವ್ಯಾಪಕ ಮಾತುಕತೆ ನಡೆಸಿದ್ದಾರೆ. ಇಸ್ರೇಲ್‍ನ ಉತ್ತರದ ಗಡಿಯಲ್ಲಿನ ಪರಿಸ್ಥಿತಿ, ಇರಾನ್, ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆ ಈ ಸಭೆಯ ಮುಖ್ಯ ಅಜೆಂಡಾ ಆಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.
ಇಸ್ರೇಲ್‍ಗೆ ಅಗತ್ಯವಿರುವ ಭದ್ರತಾ ನೆರವನ್ನು ಒದಗಿಸಲು ಅಮೆರಿಕ ಬದ್ಧ. ಆದರೆ ಅಮೆರಿಕದ ತುಕಡಿಯನ್ನು ಯುದ್ಧಭೂಮಿಯಲ್ಲಿ ನಿಯೋಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.