ಇಸ್ರೇಲ್ ವಿರುದ್ಧ ಸಂಘಟಿತ ಕಾರ್ಯಾಚರಣೆ: ಹೌದಿ, ಹಮಾಸ್ ಸಭೆ
ಗಾಝಾ: ಇಸ್ರೇಲ್ ವಿರುದ್ಧ ತಮ್ಮ ಕಾರ್ಯತಂತ್ರಗಳನ್ನು ಸಂಘಟಿತಗೊಳಿಸುವ ಉದ್ದೇಶದಿಂದ ಹಮಾಸ್ ಮತ್ತು ಯೆಮನ್ ಮೂಲದ ಹೌದಿಗಳ ಉನ್ನತ ಮುಖಂಡರು ಅಪರೂಪದ ಸಭೆಯನ್ನು ನಡೆಸಿದ್ದಾರೆ ಎಂದು ಫೆಲೆಸ್ತೀನ್ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ.
ಹಮಾಸ್ ಮತ್ತು ಹೌದಿಗಳು ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪುಗಳ ಒಕ್ಕೂಟ `ಪ್ರತಿರೋಧದ ಮೈತ್ರಿಕೂಟ'ಕ್ಕೆ ಸೇರಿವೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಈ ವೇದಿಕೆಯಲ್ಲಿ ಲೆಬನಾನ್‍ನ ಹಿಝ್ಬುಲ್ಲಾ ಮತ್ತು ಇರಾಕ್‍ನ ಸಶಸ್ತ್ರ ಹೋರಾಟಗಾರರ ಗುಂಪುಗಳೂ ಸೇರಿವೆ.
ಕಳೆದ ವಾರ ಹೌದಿಗಳ ಪ್ರತಿನಿಧಿಗಳೊಂದಿಗೆ ಹಮಾಸ್ ಹಾಗೂ `ಮಾಕ್ರ್ಸಿಸ್ಟ್ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಫೆಲೆಸ್ತೀನ್'ನ ಮುಖಂಡರು ಸಭೆ ನಡೆಸಿದ್ದಾರೆ. ಗಾಝಾದಲ್ಲಿ ಮುಂದಿನ ಹಂತದ ಯುದ್ಧದಲ್ಲಿ ತಮ್ಮ ಪ್ರತಿರೋಧದ ಕಾರ್ಯತಂತ್ರಗಳನ್ನು ಸಂಘಟಿಸಲು ಕಾರ್ಯವಿಧಾನಗಳನ್ನು ಚರ್ಚಿಸಿದ್ದಾರೆ. ಅಲ್ಲದೆ ಗಾಝಾದ ರಫಾದಲ್ಲಿ ಇಸ್ರೇಲ್‍ನ ಸಂಭಾವ್ಯ ಪದಾತಿ ದಳದ ಕಾರ್ಯಾಚರಣೆಯ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.