ಪಳೆಯುಳಿಕೆ ಇಂಧನಗಳಿಂದ ಪರಿವರ್ತನೆ: ಸಿಒಪಿ ಶೃಂಗಸಭೆಯಲ್ಲಿ ಐತಿಹಾಸಿಕ ಒಪ್ಪಂದ
ದುಬೈ: ದುಬೈಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಪಳೆಯುಳಿಕೆ ಇಂಧನಗಳಿಂದ ಜಗತ್ತು ಪರಿವರ್ತನೆಗೊಳ್ಳುವ ಉದ್ದೇಶದ ಪ್ರಪ್ರಥಮ ಐತಿಹಾಸಿಕ ಒಪ್ಪಂದಕ್ಕೆ ಸಭೆಯಲ್ಲಿ ಪಾಲ್ಗೊಂಡ ಸುಮಾರು 200 ದೇಶಗಳು ಸಮ್ಮತಿಸಿವೆ.
ಎಲ್ಲಾ ಪಳೆಯುಳಿಕೆ ಇಂಧನಗಳಿಂದ ದೂರ ಪರಿವರ್ತನೆಯಾಗುವ ಅಭೂತಪೂರ್ವ ಉಲ್ಲೇಖದೊಂದಿಗೆ ಯುಎಇ ಸಭೆಯಲ್ಲಿ ಮೂಡಿದ ಒಮ್ಮತದ ನಿರ್ಧಾರವು ನಮ್ಮ ಆರ್ಥಿಕತೆಯನ್ನು ಪುನರ್ ವ್ಯಾಖ್ಯಾನಿಸುವ ಸಾಮಥ್ರ್ಯವನ್ನು ಹೊಂದಿರುವ ಮಾದರಿ ಬದಲಾವಣೆಗೆ ಕಾರಣವಾಗಲಿದೆ' ಎಂದು ಸಿಒಪಿ28ರ ಅಧಿಕೃತ ವೆಬ್‍ಸೈಟ್‍ನಲ್ಲಿ ಟ್ವೀಟ್(ಎಕ್ಸ್) ಮಾಡಲಾಗಿದೆ.
ಸಭೆಯಲ್ಲಿ ಮಾತನಾಡಿದ ಸಿಒಪಿ28 ಶೃಂಗಸಭೆ ಅಧ್ಯಕ್ಷ ಸುಲ್ತಾನ್ ಅಲ್‍ಜಬೆರ್ `ನಮ್ಮ ಐತಿಹಾಸಿಕ ಸಾಧನೆ ಮತ್ತು ಈ ನಿರ್ಣಯವನ್ನು ಮುಂದುವರಿಸಲು ಸಹಾಯ ಮಾಡುವಲ್ಲಿ ಯುಎಇಯ ಪಾತ್ರದ ಬಗ್ಗೆ ಹೆಮ್ಮೆಯೆನಿಸುತ್ತದೆ. ಜಗತ್ತು ಹೊಸದಾರಿಯನ್ನು ಹುಡುಕುವ ಅಗತ್ಯವಿತ್ತು ಮತ್ತು ಆ ಹೊಸ ದಾರಿಯನ್ನು ನಾವೀಗ ಕಂಡುಕೊಂಡಿದ್ದೇವೆ' ಎಂದರು.
ಬುಧವಾರ ಬೆಳಿಗ್ಗೆ ಬಿಡುಗಡೆಗೊಳಿಸಿರುವ ಕರಡು ನಿರ್ಣಯದಲ್ಲಿ `ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣವನ್ನು 1.5 ಡಿಗ್ರಿ ಸೆಲ್ಶಿಯಸ್ ಮಾರ್ಗಗಳಿಗೆ ಅನುಗುಣವಾಗಿ ಆಳವಾದ, ಕ್ಷಿಪ್ರ ಮತ್ತು ಸುಸ್ಥಿರ ಕಡಿತಕ್ಕೆ ' ಕರೆ ನೀಡಲಾಗಿದೆ. ಈ ನಿರ್ಣಾಯಕ ದಶಕದಲ್ಲಿ ಕ್ಷಿಪ್ರ ಉಪಕ್ರಮಗಳ ಅಗತ್ಯವಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಿದೆ. ಗ್ರಹದ ಅಪಾಯಕಾರಿ ತಾಪಮಾನವನ್ನು ಎದುರಿಸಲು ಇತರ ಕೆಲವು ಆಯ್ಕೆಗಳನ್ನು ನೀಡಿರುವ ಈ ಹಿಂದಿನ ಕರಡು ನಿರ್ಣಯಕ್ಕೆ ಹಲವರಿಂದ ಟೀಕೆ ಎದುರಾಗಿತ್ತು. ಹೊಸ ಕರಡು ನಿರ್ಣಯದಲ್ಲಿ ಸರಣಿ ಕ್ರಮಗಳ ಮೂಲಕ ಕೊಡುಗೆ ನೀಡಲು ಎಲ್ಲಾ ದೇಶಗಳಿಗೂ ಕರೆ ನೀಡಲಾಗಿದೆ. ಇಂಧನ ವ್ಯವಸ್ಥೆಯಲ್ಲಿ ನ್ಯಾಯಯುತ, ಕ್ರಮಬದ್ಧ ಮತ್ತು ಸಮಾನ ರೀತಿಯಲ್ಲಿ ಪಳೆಯುಳಿಕೆ ಇಂಧನಗಳಿಂದ ಪರಿವರ್ತನೆಯ ಜತೆಗೆ, 2050ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವುದು ಈ ಕ್ರಮಗಳಲ್ಲಿ ಒಳಗೊಂಡಿದೆ.
ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಪಳೆಯುಳಿಕೆ ಇಂಧನಗಳ ಜಾಗತಿಕ ಬಳಕೆಯನ್ನು ಕಡಿಮೆ ಮಾಡಲು ಜಾಗತಿಕ ಮುಖಂಡರು ಒಪ್ಪಿಕೊಂಡಿರುವುದು ತೈಲ ಯುಗದ ಅಂತಿಮ ಅಂತ್ಯವನ್ನು ಸೂಚಿಸುವ ಮೊದಲ ಒಪ್ಪಂದವಾಗಿದೆ.
ಐತಿಹಾಸಿಕ ನಿರ್ಣಯ
ಸಿಒಪಿ ವೇದಿಕೆಯ ಮೂರು ದಶಕದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಪಳೆಯುಳಿಕೆ ಇಂಧನದಿಂದ ಪರಿವರ್ತನೆಗೆ ಕರೆ ನೀಡುವ ನಿರ್ಣಯಕ್ಕೆ ರಾಷ್ಟ್ರಗಳು ಸಮ್ಮತಿಸಿವೆ. ತೈಲ, ಅನಿಲ ಮತ್ತು ಕಲ್ಲಿದ್ದಲು ಸೇರಿದಂತೆ ಜಾಗತಿಕ ಇಂಧನ ಪ್ರಮಾಣದಲ್ಲಿ 80%ದಷ್ಟು ಇರುವ ಪಳೆಯುಳಿಕೆ ಇಂಧನಗಳಿಂದ ದೂರ ಸರಿಯುವ ಬಯಕೆಯಲ್ಲಿ ಜಗತ್ತು ಒಗ್ಗೂಡಿರುವುದಾಗಿ ಹೂಡಿಕೆದಾರರಿಗೆ ಮತ್ತು ನೀತಿ ನಿರೂಪಕರಿಗೆ ಪ್ರಬಲ ಸಂದೇಶವನ್ನು ರವಾನಿಸಿದೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.
ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಪಳೆಯುಳಿಕೆ ಇಂಧನಗಳು ಅತೀ ದೊಡ್ಡ ಮೂಲಗಳಾಗಿದ್ದು ಇದು ಹಮಾಮಾನ ಬದಲಾವಣೆ ಸಮಸ್ಯೆಗೆ ಪ್ರಧಾನ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.