ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಅಡೈಲಾ ಜೈಲಿನಲ್ಲಿರಿಸಲು ಕೋರ್ಟ್ ಆದೇಶ
ಇಸ್ಲಮಾಬಾದ್: ಭ್ರಷ್ಟಾಚಾರ ಪ್ರಕರಣದಲ್ಲಿ ಶನಿವಾರ ಬಂಧಿಸಲ್ಪಟ್ಟಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ರಾವಲ್ಪಿಂಡಿಯ ಅಡೈಲಾ ಜೈಲಿನಲ್ಲಿರಿಸುವಂತೆ ನ್ಯಾಯಾಲಯ ರವಿವಾರ ಆದೇಶಿಸಿದೆ.
ಶನಿವಾರ ಲಾಹೋರ್ನಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದ ಇಮ್ರಾನ್ ರನ್ನು ಪಂಜಾಬ್ ಪ್ರಾಂತದ ಅಟೋಕ್ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಇಸ್ಲಮಾಬಾದ್ ಪೊಲೀಸರು ಬಂಧಿಸಬೇಕೆಂದು ತಾನು ಆದೇಶಿಸಿದ್ದೆ. ಆದ್ದರಿಂದ ತಕ್ಷಣ ಅವರನ್ನು ಅಡೈಲಾ ಜೈಲಿಗೆ ಸ್ಥಳಾಂತರಿಸುವಂತೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹುಮಾಯೂನ್ ದಿಲಾವರ್ ಸೂಚನೆ ನೀಡಿದ್ದಾರೆ ಎಂದು `ದಿ ಡಾನ್' ವರದಿ ಮಾಡಿದೆ.
ನ್ಯಾಯಾಲಯದ ಆದೇಶದ ಪ್ರಕಾರ ಇಮ್ರಾನ್ರನ್ನು ಬಂಧಿಸಿದ ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಜೈಲಿನಲ್ಲಿ ಇರಿಸಬೇಕಿತ್ತು. ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಮ್ರಾನ್ರನ್ನು ನೇರವಾಗಿ ಜೈಲಿನ ಅಧೀಕ್ಷಕರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ರನ್ನು ಬಿಗಿ ಭದ್ರತೆಯಲ್ಲಿ ಅಟೋಕ್ ಜೈಲಿನಲ್ಲಿ ಇರಿಸಲಾಗಿದೆ ಎಂದು ಶನಿವಾರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ವಕ್ತಾರ ಝುಲ್ಫಿ ಬೊಖಾರಿ ಹೇಳಿದ್ದರು.
ಸಿಂಧೂ ನದಿಯ ದಡದಲ್ಲಿರುವ ಅಟೋಕ್ ಜೈಲಿನಲ್ಲಿ ಈ ಹಿಂದೆ ಮಾಜಿ ಪ್ರಧಾನಿ ನವಾಝ್ ಶರೀಫ್ರನ್ನು ಇರಿಸಲಾಗಿತ್ತು. ನದಿಯ ಮತ್ತೊಂದು ದಡದಲ್ಲಿ ಖೈಬರ್ ಪಖ್ತೂಂಖ್ವ ಪ್ರಾಂತವಿದೆ.
ಇಮ್ರಾನ್ ಬಂಧನ ವಿರೋಧಿಸಿ ಪ್ರತಿಭಟನೆ: 10 ಮಂದಿ ಬಂಧನ
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ 19 ಬೆಂಬಲಿಗರನ್ನು ಕರಾಚಿ ಪೊಲೀಸರು ಬಂಧಿಸಿರುವುದಾಗಿ ಎಆರ್ವೈ ನ್ಯೂಸ್ ವರದಿ ಮಾಡಿದೆ.
ಕರಾಚಿ ಪ್ರೆಸ್ಕ್ಲಬ್ನ ಎದುರುಗಡೆ ಪ್ರತಿಭಟನೆ ನಡೆಸುತ್ತಿದ್ದ 5 ಬೆಂಬಲಿಗರು, ಮಲಿರ್ ಜಿಲ್ಲೆಯಲ್ಲಿ 11, ಶರಾಫಿ ಗೋಥ್ನಲ್ಲಿ 5, ಕ್ವಿಯಾದಾಬಾದ್ನಲ್ಲಿ 6 ಉತ್ತರ ನಝೀಮಾಬಾದ್ನಲ್ಲಿ 3 ಮಂದಿ ಬೆಂಬಲಿಗರನ್ನು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಬಂಧಿಸಲಾಗಿದೆ ಎಂದು ವರದಿ ಹೇಳಿದೆ.
ಇಮ್ರಾನ್ ಬಂಧನವನ್ನು ವಿರೋಧಿಸಿ ಕಾನೂನು ಮತ್ತು ಸಂವಿಧಾನದ ವ್ಯಾಪ್ತಿಯೊಳಗೆ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುವಂತೆ ಶನಿವಾರ ಪಿಟಿಐ ಮುಖಂಡರು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು. ಸೆಷನ್ಸ್ ಕೋರ್ಟ್ನ ತೀರ್ಪನ್ನು ಇಡೀ ದೇಶವೇ ತಿರಸ್ಕರಿಸಿದೆ ಎಂದು ಪಿಟಿಐ ಹೇಳಿಕೆ ನೀಡಿದೆ.