ಲಿಬಿಯ ಚಂಡಮಾರುತ: ಸಾವಿನ ಸಂಖ್ಯೆ 10 ಸಾವಿರ ದಾಟುವ ಭೀತಿ?
ಟ್ರಿಪೋಲಿ : ಭೀಕರ ಚಂಡಮಾರುತಕ್ಕೆ ಸಾಕ್ಷಿಯಾದ ಲಿಬಿಯದ ಪೂರ್ವಭಾಗದ ನಗರ ಡೆರ್ನಾದಲ್ಲಿ ಕುಸಿದುಬಿದ್ದ ಮನೆಗಳು ಹಾಗೂ ಕಟ್ಟಡಗಳ ಭಗ್ನಾವಶೇಷಗಳಡಿಯಿಂದ ಸಾವಿರಾರು ಮಂದಿಯ ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ. ಚಂಡಮಾರುತದಿಂದಾಏಗಿ ಒಡೆದುಹೋದ ಅಣೆಕಟ್ಟೆಗಳಿಂದ ಹರಿದುಬಂದ ನೀರು, ನಗರದಲ್ಲಿ ಭೀಕರ ಪ್ರವಾಹವನ್ನು ಸೃಷ್ಟಿಸಿದ್ದು, ಇಡೀ ವಸತಿಪ್ರದೇಶಗಳನ್ನು ಕೊಚ್ಚಿಕೊಂಡು ಹೋಗಿದೆ. ಸುಮಾರು 10 ಸಾವಿರ ಮಂದಿ ನಾಪತ್ತೆಯಾಗಿದ್ದು, ಅವರು ಕೂಡಾ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದು ರಕ್ಷಣಾಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಈವರೆಗೆ ಕನಿಷ್ಠ 700 ಮಂದಿಯ ಮೃತದೇಹಗಳನ್ನು ದಫನ ಮಾಡಲಾಗಿದೆ ಎಂದು ಪೂರ್ವ ಲಿಬಿಯದ ಆರೋಗ್ಯ ಸಚಿವರು ತಿಳಿಸಿದ್ದಾರೆ.ನಗರದಲ್ಲಿ ಚಂಡಮಾರುತಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2300ಕ್ಕೇರಿದೆಯೆಂದು ಡೆರ್ನಾದ ಆ್ಯಂಬುಲೆನ್ಸ್ ಪ್ರಾಧಿಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆಯೆಂದು ಲಿಬಿಯಾದಲ್ಲಿನ ರೆಡ್ ಕ್ರಾಸ್ ಹಾಗೂ ರೆಡ್ ಕ್ರಿಸೆಂಟ್ ಸೊಸೈಟಿಗಳ ಅಂತಾರಾಷ್ಟ್ರೀಯ ಒಕ್ಕೂಟದ ಲಿಬಿಯ ರಾಯಭಾರಿ ತಾಮೆರ್ ರಮದಾನ್ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಮೊರಕ್ಕೊದ ನಗರವಾದ ಮರಾಕೇಶ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಷ್ಟೇ ಲಿಬಿಯದ ಪರಿಸ್ಥಿತಿಯೂ ವಿನಾಶಕಾರಿಯಾಗಿದೆ ಎಂದು ರಮದಾನ್ ಹೇಳಿದರು.
ಮೆಡಿಟರೇನಿಯನ್ ಸಮುದ್ರದ ಡೇನಿಯಲ್ ಚಂಡಮಾರುತವು ರವಿವಾರ ರಾತ್ರಿ ಪೂರ್ವ ಲಿಬಿಯದ ಡೆರ್ನಾ ಹಾಗೂ ಇತರ ನಗರಗಳಲ್ಲಿ ಅಪ್ಪಳಿಸಿದ್ದು, ವ್ಯಾಪಕ ನಾಶ ಹಾಗೂ ಸಾವಿರಾರು ಮಂದಿಯ ಪ್ರಾಣಹಾನಿಗೆ ಕಾರಣವಾಗಿದೆ. ಚಂಡಮಾರುತದ ತೀವ್ರತೆಗೆ ನಗರದ ಹೊರವಲಯದಲ್ಲಿ ಅಣೆಕಟ್ಟು ಒಡೆದು ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಸಾವಿರಾರು ಮಂದಿ ಕೊಚ್ಚಿ ಹೋಗಿದ್ದಾರೆ.
ಚಂಡಮಾರುತದ ಬಳಿಕ ಡೆರ್ನಾ ನಗರ ಪ್ರವಾಹದಲ್ಲಿ ಮುಳುಗಿದ್ದರಿಂದ ರಕ್ಷಣಾ ಸಿಬ್ಬಂದಿಗಳು ಅಲ್ಲಿಗೆ ತಲುಪುವುದು ಅಸಾಧ್ಯವಾಗಿ 90 ಸಾವಿರಕ್ಕೂ ಅಧಿಕ ನಿವಾಸಿಗಲು ಅತಂತ್ರರಾಗಿದ್ದರು.
ನಗರದಾದ್ಯಂತ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಬುಧವಾರ ಚುರುಕುಗೊಂಡಿದ್ದು, ರಕ್ಷಣಾ ಕಾರ್ಯಕರ್ತರು ಕುಸಿದುಬಿದ್ದ ಅವಶೇಷಗಡಿಯಿಂದ ನೂರಾರು ಶವಗಳನ್ನು ಹೊರಗೆಳೆಯುತ್ತಿರುವ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.