ಡೇವಿಸ್ ಕಪ್: ಪಾಕ್ ವಿರುದ್ಧ ಪಂದ್ಯಕ್ಕೆ ರಾಮ್ ಕುಮಾರ್ ಭಾರತದ ನಾಯಕ
ಹೊಸದಿಲ್ಲಿ: ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ಪಂದ್ಯಕ್ಕೆ ಭಾರತದ ಐವರು ಸದಸ್ಯರ ತಂಡಕ್ಕೆ ರವಿವಾರ ರಾಮ್ ಕುಮಾರ್ ರಾಮನಾಥನ್ ಸೇರ್ಪಡೆಯಾಗಿದ್ದಾರೆ. ಭದ್ರತಾ ಕಳವಳದ ಕಾರಣಕ್ಕೆ ನೆರೆಯ ರಾಷ್ಟ್ರಕ್ಕೆ ಪ್ರಯಾಣಿಸುವ ಕುರಿತು ತನ್ನ ಮೇಲ್ಮನವಿಯ ಕುರಿತು ಐಟಿಎಫ್ ಟ್ರಿಬ್ಯುನಲ್ ನಿರ್ಧಾರಕ್ಕೆ ಎಐಟಿಎ ಕಾಯುತ್ತಿರುವಾಗಲೇ ಭಾರತೀಯ ಡೇವಿಸ್ ಕಪ್ ತಂಡವು ಪಾಕಿಸ್ತಾನದ ಮಣ್ಣಿನಲ್ಲಿ 60 ವರ್ಷಗಳಲ್ಲಿ ಮೊದಲ ಬಾರಿ ಆಡಲು ತಯಾರಿ ನಡೆಸುತ್ತಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡಿದೆ.
ಭಾರತವು 1964ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು, ಆಗ ಆತಿಥೇಯ ಪಾಕ್ ತಂಡವನ್ನು 4-0 ಅಂತರದಿಂದ ಮಣಿಸಿತ್ತು. ಡೇವಿಸ್ ಕಪ್ ಸ್ಪರ್ಧಾವಳಿಯಲ್ಲಿ 8 ಬಾರಿ ಪಾಕ್ ಎದುರಿಸಿರುವ ಭಾರತ ಈ ತನಕ ಸೋಲುಂಡಿಲ್ಲ.
ರಾಮ್ ಕುಮಾರ್ ಅವರು ಶ್ರೀರಾಮ್ ಬಾಲಾಜಿ, ಯೂಕಿ ಭಾಂಬ್ರಿ, ನಿಕಿ ಪೂಣಚ ಹಾಗೂ ಸಾಕೇತ್ ಮೈನೇನಿ ಅವರನ್ನೊಳಗೊಂಡ ಭಾರತ ತಂಡದ ನೇತೃತ್ವವಹಿಸಲಿದ್ದಾರೆ.
ಫೆಬ್ರವರಿ 3-4ರಂದು ನಡೆಯುವ ವರ್ಲ್ಡ್ ಗ್ರೂಪ್-1 ಪ್ಲೇ ಆಫ್ ಗೆ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ರವಿವಾರ ತಂಡವನ್ನು ಪ್ರಕಟಿಸಿದೆ. ಸೆಪ್ಟಂಬರ್ ನಲ್ಲಿ ಲಕ್ನೊದಲ್ಲಿ ನಡೆದಿದ್ದ ಡೇವಿಸ್ ಕಪ್ ನಲ್ಲಿ ಆಡಿದ್ದ ದಿಗ್ವಿಜಯ್ ಪ್ರತಾಪ್ ಸಿಂಗ್ ಮೀಸಲು ಆಟಗಾರನಾಗಿದ್ದಾರೆ.
ಭಾರತದ ಅಗ್ರ ಆಟಗಾರರಾದ ಸುಮಿತ್ ನಗಾಲ್ ಹಾಗೂ ಸಸಿ ಕುಮಾರ್ ಮುಕುಂದ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.