ಡೆನ್ಮಾರ್ಕ್: ಇಸ್ರೇಲ್ ರಾಯಭಾರ ಕಚೇರಿ ಬಳಿ ಮತ್ತೆ ಸ್ಫೋಟ
ಕೋಪನ್ಹ್ಯಾಗನ್, : ಡೆನ್ಮಾರ್ಕ್ ರಾಜಧಾನಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಬಳಿ ಮತ್ತೊಂದು ಸ್ಫೋಟ ಸಂಭವಿಸಿರುವುದಾಗಿ ಪೊಲೀಸರು ಸೋಮವಾರ ಹೇಳಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ದಾಳಿಗೆ ಅಕ್ಟೋಬರ್ 7ರಂದು(ಸೋಮವಾರ) ಒಂದು ವರ್ಷವಾಗಿರುವ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದ್ದು ಯಾವುದೇ ಸಾವು-ನೋವು ವರದಿಯಾಗಿಲ್ಲ. ಅಕ್ಟೋಬರ್ 2ರಂದೂ ಇದೇ ಪ್ರದೇಶದಲ್ಲಿ, ರಾಯಭಾರ ಕಚೇರಿ ಬಳಿ ಎರಡು ಸ್ಫೋಟ ಸಂಭವಿಸಿದ್ದು ಇಬ್ಬರು ಸ್ವೀಡನ್ ಪ್ರಜೆಗಳನ್ನು ಕಸ್ಟಡಿಗೆ ಪಡೆಯಲಾಗಿದೆ. ಎರಡೂ ಘಟನೆಗಳ ನಡುವೆ ಸಂಬಂಧವಿದೆಯೇ ಎಂಬ ಬಗ್ಗೆ ಖಂಡಿತಾ ಪರಿಶೀಲಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಇಸ್ರೇಲ್ ರಾಯಭಾರ ಕಚೇರಿಯಿಂದ ಸುಮಾರು 500 ಮೀಟರ್ ದೂರದ ವಸತಿ ಕಟ್ಟಡದ ಎದುರು ಸ್ಫೋಟದ ಕುರುಹುಗಳನ್ನು ಸ್ಥಳೀಯ ಮಾಧ್ಯಮಗಳಲ್ಲಿನ ಚಿತ್ರಗಳು ತೋರಿಸಿವೆ. ಡೆನ್ಮಾರ್ಕ್ನಲ್ಲಿ ಅಕ್ಟೋಬರ್ 2ರಂದು ಸಂಭವಿಸಿದ ಸ್ಫೋಟದಲ್ಲಿ ಮತ್ತು ಅಕ್ಟೋಬರ್ 1ರಂದು ಸ್ಟಾಕ್ಹೋಮ್ನಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇರಾನ್ ಭಾಗಿಯಾಗಿರಬಹುದು ಎಂದು ಸ್ವೀಡನ್ನ ಗುಪ್ತಚರ ಏಜೆನ್ಸಿ `ಸಪೊ' ಹೇಳಿದೆ.