ಗಾಝಾದ ಜನರಲ್ಲಿ ಹತಾಶೆ ಹೆಚ್ಚುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಜಿನೆವಾ: ಉತ್ತರ ಗಾಝಾದಲ್ಲಿ ಆಂಶಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಆಸ್ಪತ್ರೆಗಳಲ್ಲಿ ಸ್ಥಳಾಂತರಗೊಂಡ ಸಂತ್ರಸ್ತರು ನೆಲೆಸಿದ್ದು ಆಹಾರ, ನೀರು, ಔಷಧದ ಕೊರತೆ ತೀವ್ರಗೊಂಡಿದೆ. ಜನರಲ್ಲಿ ಹತಾಶೆ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರಯೇಸಸ್ ಎಚ್ಚರಿಕೆ ನೀಡಿದ್ದಾರೆ.
ಗಾಝಾಕ್ಕೆ ಆಹಾರ ಮತ್ತು ನೀರಿನ ಪೂರೈಕೆಯನ್ನು ತಕ್ಷಣ ಹೆಚ್ಚಿಸುವ ಮೂಲಕ ಆರೋಗ್ಯ ಮತ್ತು ದೃಢತೆಯನ್ನು ಖಾತರಿ ಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಗಾಝಾದಲ್ಲಿ ನಿರಂತರ ಮುಂದುವರಿದ ಹಗೆತನದ ದಾಳಿಗಳು ಹಾಗೂ ಆಸ್ಪತ್ರೆಗೆ ದಾಖಲಾಗುವ ಗಾಯಗೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಗಾಝಾದ ಅತೀ ದೊಡ್ಡ ಆಸ್ಪತ್ರೆ ಅಲ್-ಶಿಫಾದ ಬಹುತೇಕ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಡಿಸೆಂಬರ್ 23ರಂದು ವಿಶ್ವಸಂಸ್ಥೆ ಹಾಗೂ ಇತರ ನೆರವಿನ ಏಜೆನ್ಸಿಗಳು ಆಸ್ಪತ್ರೆಗೆ 19,200 ಲೀಟರ್ ಇಂಧನವನ್ನು ಪೂರೈಸಿದ್ದು ಇದು ಆಸ್ಪತ್ರೆಯ ಜನರೇಟರ್ನ ಕಾರ್ಯನಿರ್ವಹಣೆ ಮುಂದುವರಿಸಲು ನೆರವಾಗಲಿದೆ ಎಂದವರು ಹೇಳಿದ್ದಾರೆ.
ವೈಮಾನಿಕ ದಾಳಿ ಅಲ್-ಶಿಫಾ ಆಸ್ಪತ್ರೆಯ ಆಮ್ಲಜನಕ ಘಟಕವನ್ನು ನಾಶಪಡಿಸಿದ್ದು ಆಸ್ಪತ್ರೆಗೆ ಗಮನಾರ್ಹ ಹಾನಿಯಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳಷ್ಟೇ ಅಲ್ಲ, ನೆಲೆ ಕಳೆದುಕೊಂಡ ಸಾವಿರಾರು ಸಂತ್ರಸ್ತರೂ ಆಶ್ರಯ ಪಡೆದಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್-ಶಿಫಾದಲ್ಲಿನ ಭೀಕರ ಪರಿಸ್ಥಿತಿಯು ಗಾಝಾದ್ಯಂತ ವ್ಯಾಪಿಸಿರುವ ದುಃಸ್ವಪ್ನದ ಸೂಕ್ಷ್ಮದರ್ಶಕವಾಗಿದೆ. ಇಲ್ಲಿ ಔಷಧಗಳು, ಆಹಾರ, ವಿದ್ಯುತ್, ನೀರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸುರಕ್ಷತೆಯ ಕೊರತೆಯು ಜನಸಮುದಾಯವನ್ನು ಅಪಾಯಕ್ಕೆ ದೂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಿ ಮಾನವೀಯ ನೆರವಿನ ಪೂರೈಕೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸಬೇಕು ಎಂಬ ಆಗ್ರಹವನ್ನು ಗೆಬ್ರಯೇಸಸ್ ಪುನರುಚ್ಚರಿಸಿದ್ದಾರೆ.
ಆಸ್ಪತ್ರೆಗಳು ಆರೈಕೆ ಮತ್ತು ಚೇತರಿಕೆಯ ಕೇಂದ್ರವಾಗಿರಬೇಕು. ಅಪಾಯದ ಮತ್ತು ನಿರಂತರ ಸಂಕಟದ ಸ್ಥಳ ಆಗಬಾರದು ಎಂದು ಘೆಬ್ರಯೇಸಸ್ ಹೇಳಿದ್ದಾರೆ.
ಡಿಸೆಂಬರ್ 23ರಂದು ವಿಶ್ವಸಂಸ್ಥೆ ಹಾಗೂ ಇತರ ನೆರವು ಸಂಸ್ಥೆಗಳ ಜಂಟಿ ನಿಯೋಗವು ಗಾಝಾದ `ಪೇಷಂಟ್ ಫ್ರೆಂಡ್ಸ್ ಆಸ್ಪತ್ರೆ'ಗೂ ಭೇಟಿ ನೀಡಿತ್ತು. ಹೆರಿಗೆ, ಆಘಾತ ಮತ್ತು ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಈ ಆಸ್ಪತ್ರೆಯಲ್ಲಿ ತಜ್ಞ ಶಸ್ತ್ರಚಿಕಿತ್ಸಕರು, ತೀವ್ರ ನಿಗಾ ಘಟಕದ ಸಿಬಂದಿ, ಆ್ಯಂಟಿಬಯಾಟಿಕ್ಸ್ಗಳು, ಮೂಲಭೂತ ಔಷಧಗಳ ಕೊರತೆಯಿದೆ. ಅಲ್-ಸಹಾಬ ಮತ್ತು ಅಲ್-ಹೆಲೊವ್ ಹೆರಿಗೆ ಆಸ್ಪತ್ರೆಯಲ್ಲಿ ಇಂಧನ, ಆಹಾರ, ನೀರು, ಆಮ್ಲಜನಕ, ಅನಸ್ತೇಷಿಯಾದ ತೀವ್ರ ಕೊರತೆಯಿದೆ ಎಂದವರು ಹೇಳಿದ್ದಾರೆ.