ಡೊನಾಲ್ಡ್ ಟ್ರಂಪ್ ಗೆ 354.9 ದಶಲಕ್ಷ ಡಾಲರ್ ದಂಡ ವಿಧಿಸಿದ ನ್ಯಾಯಾಲಯ
ಹೊಸದಿಲ್ಲಿ: ತಮ್ಮ ನಿವ್ವಳ ಮೌಲ್ಯವನ್ನು ವಂಚನೆಯ ವಿಧಾನದ ಮೂಲಕ ಅಧಿಕವಾಗಿ ತೋರಿಸಿದ ಆರೋಪದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ ಶುಕ್ರವಾರ 354.9 ದಶಲಕ್ಷ ಡಾಲರ್ ದಂಡ ವಿಧಿಸಿದೆ.
ಈ ತೀರ್ಪಿನ ವಿರುದ್ಧ ತಮ್ಮ ಟ್ರುಥ್ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿರುವ ಮಾಜಿ ಅಧ್ಯಕ್ಷ, "ಈ ನಿರ್ಧಾರ ಸಂಪೂರ್ಣ ನಾಚಿಕೆಗೇಡು" ಎಂದು ಬಣ್ಣಿಸಿದ್ದಾರೆ. ಅವರ ವಕೀಲರಲ್ಲೊಬ್ಬರಾದ ಅಲಿನಾ ಕೂಡಾ ಈ ತೀರ್ಪು ಸ್ಪಷ್ಟ ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ. "ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ವಿರುದ್ಧದ ಪಿತೂರಿ ಅಟಾರ್ನಿ ಜನರಲ್ ಅವರ ಕಚೇರಿಗೂ ಲಗ್ಗೆ ಇಟ್ಟಿದೆ" ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಶಿಯಾ ಜೇಮ್ಸ್ ಅವರು ಈ ಪ್ರಕರಣವನ್ನು ಆರಂಭಿಸಿದ್ದು, ಟ್ರಂಪ್ ಹಾಗೂ ಅವರ ಕುಟುಂಬ ವ್ಯವಹಾರದ ಒಟ್ಟು ಮೌಲ್ಯವನ್ನು 3.6 ಶತಕೋಟಿ ಎಂದು ಬಿಂಬಿಸಿಕೊಂಡಿದ್ದು, ಸಾಲದಾತರಿಂದ ಹೆಚ್ಚಿನ ಸಾಲವನ್ನು ಪಡೆಯುವ ಸಲುವಾಗಿ ಹಲವು ದಶಕಗಳಿಂದ ವಂಚನಾ ಕ್ರಮದಿಂದ ಈ ಮೌಲ್ಯವನ್ನು ತೋರಿಸಿಕೊಂಡು ಬಂದಿದೆ ಎಂದು ಅವರು ಆಪಾದಿಸಿದ್ದರು.
ನ್ಯಾಯಮೂರ್ತಿ ಆರ್ಥನ್ ಎನ್ಗೊರನ್ ಅವರ ತೀರ್ಪು ಟ್ರಂಪ್ ವಿರುದ್ಧ ಭಾರಿ ಮೊತ್ತದ ದಂಡ ವಿಧಿಸಿರುವುದು ಮಾತ್ರವಲ್ಲದೇ, ಯಾವುದೇ ನ್ಯೂಯಾರ್ಕ್ ಕಾರ್ಪೊರೇಷನ್ಗಳಲ್ಲಿ ಟ್ರಂಪ್ ಮೂರು ವರ್ಷ ಅಧಿಕಾರ ವಹಿಸಿಕೊಳ್ಳುವುದನ್ನು ನಿಷೇಧಿಸಿದೆ. ಇದು ಟ್ರಂಪ್ ಅವರ ರಿಯಲ್ ಎಸ್ಟೇಟ್ ಸಾಮ್ರಾಜ್ಯಕ್ಕೆ ಮತ್ತೊಂದು ಹಿನ್ನಡೆಯಾಗಿದೆ.