ಇಮ್ರಾನ್ ಖಾನ್ ಪಕ್ಷದ ಹೇಳಿಕೆ ತಿರಸ್ಕರಿಸಿದ ಪಾಕ್ ಚುನಾವಣಾ ಆಯೋಗ
ಇಸ್ಲಮಾಬಾದ್ : ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲಾ ಪಕ್ಷಗಳಿಗೂ ಸಮಾನ ಮತ್ತು ನ್ಯಾಯಯುತ ಪರಿಸ್ಥಿತಿಯ ಕೊರತೆಯಿದೆ ಎಂಬ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಪಾಕಿಸ್ತಾನದ ಚುನಾವಣಾ ಆಯೋಗ ಹೇಳಿದೆ.
ಪಿಟಿಐ ಪಕ್ಷ(ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ)ದ ಬಹುತೇಕ ಮುಖಂಡರನ್ನು ಬಂಧಿಸದಂತೆ ಆದೇಶ ನೀಡುವ ಮೂಲಕ ಸಮಾನ ಸ್ಪರ್ಧೆಯ ಪರಿಸ್ಥಿತಿ ನಿರ್ಮಿಸಬೇಕೆಂದು ಕೋರಿ ಪಿಟಿಐ ಪಕ್ಷ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಪಕ್ಷದ 668 ಅಭ್ಯರ್ಥಿಗಳ ನಾಮಪತ್ರ ತಿರಸ್ಕತಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪಿಟಿಐ ಪಕ್ಷ ಎತ್ತಿರುವ ಆಕ್ಷೇಪಗಳಿಗೆ ಪ್ರತಿಕ್ರಿಯಿಸುವಂತೆ ಡಿಸೆಂಬರ್ನಲ್ಲಿ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಇದಕ್ಕೆ ಉತ್ತರಿಸಿರುವ ಚುನಾವಣಾ ಆಯೋಗ, ಪಿಟಿಐ ಪಕ್ಷದ 76%ಕ್ಕೂ ಅಧಿಕ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ ಎಂದಿದೆ. ಜತೆಗೆ ಎಲ್ಲಾ ಪಕ್ಷಗಳ ಸ್ಪರ್ಧೆಗೆ ಸಮಾನ ಮತ್ತು ನ್ಯಾಯಯುತ ಅವಕಾಶ ಒದಗಿಸಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿರುವುದಾಗಿ ‘ಎಆರ್ಐ ನ್ಯೂಸ್’ ವರದಿ ಮಾಡಿದೆ.