ಮಾನವ ಹಕ್ಕುಗಳ ದಮನ ನಿಲ್ಲಿಸಲು ಚೀನಾಕ್ಕೆ ಇಯು ಆಗ್ರಹ
ಬ್ರಸೆಲ್ಸ್: ಮಾನವ ಹಕ್ಕುಗಳ ದಮನವನ್ನು ನಿಲ್ಲಿಸುವಂತೆ ಯುರೋಪಿಯನ್ ಯೂನಿಯನ್(ಇಯು) ಚೀನಾವನ್ನು ಆಗ್ರಹಿಸಿದ್ದು ಚೀನಾದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಕ್ಸಿನ್‍ಜಿಯಾಂಗ್, ಟಿಬೆಟ್ ಮತ್ತು ಹಾಂಕಾಂಗ್‍ನಲ್ಲಿ `ಅತ್ಯಂತ ಗಂಭೀರ ಮಾನವ ಹಕ್ಕುಗಳ ಪರಿಸ್ಥಿತಿಯಿದೆ' ಎಂದು ಕಳವಳ ವ್ಯಕ್ತಪಡಿಸಿದೆ.
ಯುರೋಪಿಯನ್ ಯೂನಿಯನ್‍ನ ನಿಯೋಗವು ಟಿಬೆಟ್‍ಗೆ ಭೇಟಿ ನೀಡಿದ ಬಳಿಕ ಚೀನಾದ ಅಧಿಕಾರಿಗಳನ್ನು ಭೇಟಿಯಾಗಿತ್ತು. ಈ ಸಂದರ್ಭ ಚೀನಾದಲ್ಲಿ ಮಾನವ ಹಕ್ಕುಗಳ ಸಮರ್ಥಕರು, ನ್ಯಾಯವಾದಿಗಳು ಮತ್ತು ಪತ್ರಕರ್ತರ ವಿರುದ್ಧದ ದಮನ ಕ್ರಮಗಳ ಕುರಿತ ವರದಿಯನ್ನು ಉಲ್ಲೇಖಿಸಲಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯುವಂತೆ, ಕಾನೂನು ಬಾಹಿರ ಬಂಧನ, ಬಲವಂತದ ಕಣ್ಮರೆ ಪ್ರಕರಣ, ಚಿತ್ರಹಿಂಸೆ ಮತ್ತು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಚೀನಾದ ಅಧಿಕಾರಿಗಳನ್ನು ಆಗ್ರಹಿಸಲಾಗಿದೆ ಎಂದು ಇಯು ನಿಯೋಗವನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ಸ್ವೀಡನ್ ಪ್ರಜೆ ಗುಯಿ ಮಿನ್ಹಾಯಿ, ಉಯ್ಗರ್ ಬುದ್ಧಿಜೀವಿಗಳಾದ ತೋಹ್ತಿ, ಗುಲ್ಷಾನ್ ಅಬ್ಬಾಸ್ ಮತ್ತು ರಾಹಿಲ್ ದಾವುತ್‍ರ ಬಂಧನದ ಬಗ್ಗೆಯೂ ಯುರೋಪಿಯನ್ ಯೂನಿಯನ್ ನಿಯೋಗ ಪ್ರಸ್ತಾವಿಸಿದೆ. ಜತೆಗೆ, ಚೀನಾದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಸ್ವತಂತ್ರ ಪತ್ರಕರ್ತ ಹುವಾಂಗ್ ಕ್ಸುಕಿನ್‍ಗೆ ಶುಕ್ರವಾರ ಐದು ವರ್ಷಗಳ ಸೆರೆವಾಸ ವಿಧಿಸಿರುವ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿರುವುದಾಗಿ ಇಯು ನಿಯೋಗ ಹೇಳಿದೆ.
ಮಾನವ ಹಕ್ಕುಗಳ ದಮನ | ಇಯು ವರದಿ ತಳ್ಳಿಹಾಕಿದ ಚೀನಾ
ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತ ಯುರೋಪಿಯನ್ ಯೂನಿಯನ್ ನಿಯೋಗದ ವರದಿಯನ್ನು ಚೀನಾ ಮಂಗಳವಾರ ತಳ್ಳಿಹಾಕಿದೆ.
ಯುರೋಪಿಯನ್ ಯೂನಿಯನ್‍ನ ಇಬ್ಬಗೆಯ ಮಾನದಂಡಗಳನ್ನು ಹಾಗೂ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಬಲವಾಗಿ ವಿರೋಧಿಸುವುದಾಗಿ ಚೀನಾ ಪ್ರತಿಕ್ರಿಯಿಸಿದೆ. ಸಮಾನತೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಯುರೋಪಿಯನ್ ಯೂನಿಯನ್ ಜತೆ ಸಹಕರಿಸಲು ಚೀನಾ ಸಿದ್ಧವಾಗಿದೆ. ಇದೇ ವೇಳೆ ಮಾನವ ಹಕ್ಕುಗಳ ವಿಷಯವನ್ನು ರಾಜಕೀಯಗೊಳಿಸುವುದು, ಇಬ್ಬಗೆಯ ಮಾನದಂಡಗಳು, ಒಬ್ಬರ ನಿಲುವನ್ನು ಮತ್ತೊಬ್ಬರ ಮೇಲೆ ಹೇರುವುದನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇಯು ನಿಯೋಗದ ಚೀನಾ ಭೇಟಿಯನ್ನು ಉಲ್ಲೇಖಿಸಿದ ಅವರು, ಸಂವಾದ ಮುಕ್ತ ಮತ್ತು ವಿಷಯಾಧಾರಿತವಾಗಿತ್ತು ಎಂದು ಎರಡೂ ಕಡೆಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರ ಹಕ್ಕುಗಳನ್ನು ಒಳಗೊಂಡಂತೆ ಮತ್ತಷ್ಟು ಬಹುಪಕ್ಷೀಯ ಮಾನವ ಹಕ್ಕುಗಳ ಸಹಕಾರದ ಬಗ್ಗೆ ವಿಚಾರ ವಿನಿಮಯಕ್ಕೆ ಚೀನಾ ಸಿದ್ಧವಿದೆ ಎಂದರು.