ವಿಮಾನದಲ್ಲಿ ನೀಡಿದ ಆಹಾರದ ಬಾಕ್ಸ್ ನಿಂದ ಹೊರಜಿಗಿದ ಇಲಿ | ವಿಮಾನ ತುರ್ತು ಭೂಸ್ಪರ್ಷ
Update: 2024-09-21 17:01 GMT
ಓಸ್ಲೋ : ನಾರ್ವೆಯ ರಾಜಧಾನಿ ಓಸ್ಲೋದಿಂದ ಸ್ಪೇನ್‍ಗೆ ಪ್ರಯಾಣಿಸುತ್ತಿದ್ದ ವಿಮಾನವೊಂದು ಮಾರ್ಗ ಮಧ್ಯದಲ್ಲಿಯೇ ತುರ್ತು ಭೂಸ್ಪರ್ಷ ಮಾಡಿದೆ. ಕಾರಣ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ನೀಡಿದ್ದ ಆಹಾರದ ಪೊಟ್ಟಣದಿಂದ ಜೀವಂತ ಇಲಿಯೊಂದು ಹೊರಜಿಗಿದಿದೆ.
ಓಸ್ಲೋದಿಂದ ಸ್ಪೇನ್‍ನ ಮಲಾಗಕ್ಕೆ ಟೇಕಾಫ್ ಆಗಿದ್ದ ಸ್ಕಾಂಡಿನೇವಿಯನ್ ಏರ್‍ಲೈನ್ಸ್ ವಿಮಾನ ಮಾರ್ಗ ಮಧ್ಯದಲ್ಲಿಯೇ ಡೆನ್ಮಾರ್ಕ್‍ನ ಕೋಪೆನ್‍ಹೇಗನ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ. ದಂಶಕಗಳು(ಇಲಿ, ಅಳಿಲು ಇತ್ಯಾದಿ) ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದರಿಂದ ಕಂಪೆನಿಯ ಕಾರ್ಯ ವಿಧಾನಗಳಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಏರ್‍ಲೈನ್ಸ್‍ನ ವಕ್ತಾರರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ತುರ್ತು ಭೂಸ್ಪರ್ಷದ ಬಳಿಕ ಎಲ್ಲಾ ಪ್ರಯಾಣಿಕರನ್ನೂ ಅವರ ಮೂಲ ಗಮ್ಯಸ್ಥಾನಕ್ಕೆ ಬೇರೆ ವಿಮಾನದ ಮೂಲಕ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.