ಲಿಬಿಯಾದಲ್ಲಿ ವಿನಾಶ ಸೃಷ್ಟಿಸಿದ ಪ್ರವಾಹ, ಚಂಡಮಾರುತ; 2000ಕ್ಕೂ ಅಧಿಕ ಮಂದಿ ಬಲಿ
ಟ್ರಿಪೊಲಿ: ಲಿಬಿಯಾದ ಡೆರ್ನಾ ನಗರದಲ್ಲಿ ಅಭೂತಪೂರ್ವ ಪ್ರವಾಹದಿಂದಾಗಿ 2,000ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆಂದು ಶಂಕಿಸಲಾಗಿದೆ. ಚಂಡಮಾರುತ ಡೇನಿಯಲ್ ರವಿವಾರ ಪೂರ್ವ ಲಿಬಿಯಾಗೆ ಅಪ್ಪಳಿಸಿದ್ದು, ಕಂಡುಕೇಳರಿಯದ ಪ್ರವಾಹದಿಂದಾಗಿ ಅಪಾರ ಸಾವುನೋವು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ.
ಡೆರ್ನಾ ನಗರದ ಪಕ್ಕದಲ್ಲಿರುವ ಜಲಾಶಯಗಳು ಕುಸಿದ ಪರಿಣಾಮ ಹತ್ತಿರದ ಹಲವಾರು ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮೂರು ಸೇತುವೆಗಳೂ ನಾಶಗೊಂಡಿವೆ ಎಂದು ಪೂರ್ವ ಲಿಬಿಯಾವನ್ನು ನಿಯಂತ್ರಿಸುವ ಲಿಬಿಯನ್ ನ್ಯಾಷನಲ್ ಆರ್ಮಿಯ ವಕ್ತಾರರು ತಿಳಿಸಿದ್ದಾರೆ.
ಪ್ರವಾಹದಲ್ಲಿ ಮುಳುಗಿರುವ ಕಾರುಗಳು, ಕುಸಿದ ಕಟ್ಟಡಗಳು, ಸೇತುವೆಗಳು ಹಾಗೂ ರಸ್ತೆ ತುಂಬಾ ನೀರು ಹರಿಯುತ್ತಿರುವ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪೂರ್ವ ಲಿಬಿಯಾದ ಆರೋಗ್ಯ ಸಚಿವ ಒತ್ಮಾನ್ ಅಬ್ದುಲ್ ಜಲೀಲ್ ಮಾತನಾಡಿ ಡೆರ್ನಾದಲ್ಲಿನ ಪರಿಸ್ಥಿತಿ ವಿನಾಶಕಾರಿಯಾಗಿದೆ. ಹಲವಾರು ಕಡೆಗಳಲ್ಲಿ ಮೃತದೇಹಗಳು ಇನ್ನೂ ದುರಂತ ಸ್ಥಳಗಳಲ್ಲಿಯೇ ಇವೆ ಎಂದಿದ್ದಾರೆ.
ಈ ವಿನಾಶಕಾರಿ ಪ್ರವಾಹದಲ್ಲಿ ಮೃತಪಟ್ಟಿರುವವರ ಸಂಖ್ಯೆ ಇನ್ನೂಹೆಚ್ಚಾಗುವ ಭೀತಿಯಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಏಳು ಲಿಬಿಯನ್ ಸೇನಾ ಸಿಬ್ಬಂದಿ ಕಾಣೆಯಾಗಿದ್ದಾರೆಂದು ವರದಿಯಾಗಿದೆ.
ಸುಮಾರು 60 ಲಕ್ಷ ಜನಸಂಖ್ಯೆಯಿರುವ ಲಿಬಿಯಾ ದೇಶವು ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ 2014ರಿಂದ ಪರಸ್ಪರ ಎದುರಾಳಿ ಆಡಳಿತಗಳನ್ನು ಹೊಂದಿವೆ. ಪ್ರವಾಹದ ನಂತರ ಎರಡೂ ಸರ್ಕಾರಗಳು ಮೂರು ದಿನಗಳ ಶೋಕಾಚರಣೆ ಘೋಷಿಸಿವೆ