ಅಮೆರಿಕದ ಮಾಜಿ ಅಧ್ಯಕ್ಷ ಶತಾಯುಷಿ ಜಿಮ್ಮಿ ಕಾರ್ಟರ್ ನಿಧನ
ವಾಷಿಂಗ್ಟನ್: ನೂರು ವರ್ಷ ಪೂರೈಸಿದ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಸೋಮವಾರ ಜಾರ್ಜಿಯಾದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 2023ರಿಂದ ವಯೋಸಂಬಂಧಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಅಮೆರಿಕದ 39ನೇ ಅಧ್ಯಕ್ಷರಾಗಿ 1977 ರಿಂದ 1981ರವರೆಗೆ ಕಾರ್ಯನಿರ್ವಹಿಸಿದ್ದ ಅವರು ಪ್ರಾಮಾಣಿಕತೆ ಮತ್ತು ಮಾನವೀಯ ಪ್ರಯತ್ನಗಳಿಗಾಗಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರರಾಗಿದ್ದರು. 2002ರಲ್ಲಿ ಅವರಿಗೆ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ವಿಶ್ವಾದ್ಯಂತ ಪಸರಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
ಜಾರ್ಜಿಯಾದ ಪ್ಲೈನ್ಸ್‌ನಲ್ಲಿ ಜನಿಸಿದ ಕಾರ್ಟರ್, ಸಾರ್ವಜನಿಕ ಸೇವೆ ಮತ್ತು ಮಾನವತೆಯ ಸೇವೆಯ ಹಿನ್ನೆಲೆಯಿಂದ ಅಧ್ಯಕ್ಷೀಯ ಪದವಿಗೆ ಏರಿದವರು. ಎಂಜಿನಿಯರಿಂಗ್ ಪದವೀಧರರಾಗಿ ಬಳಿಕ ಜಾರ್ಜಿಯಾದ ಗವರ್ನರ್ ಆದ ಕಾರ್ಟರ್ 1976ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಹೊರಗಿನವರು ಎನಿಸಿಕೊಂಡಿದ್ದರು.
ಪ್ರಾಮಾಣಿಕತೆ ಬಗೆಗಿನ ಅವರ ಆಶ್ವಾಸನೆ ಇಡೀ ದೇಶದ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. "ನಾನು ಎಂದಾದರೂ ನಿಮಗೆ ಸುಳ್ಳು ಹೇಳಿದರೆ, ತಪ್ಪುದಾರಿಗೆ ಎಳೆಯುವಂತ ಹೇಳಿಕೆಗಳನ್ನು ನೀಡಿದರೆ ನನಗೆ ಮತ ನೀಡಬೇಡಿ" ಎಂದು ಬಹಿರಂಗವಾಗಿ ಪ್ರಚಾರ ಮಾಡಿದ್ದರು. ವಾಟರ್‌ಗೇಟ್ ಹಗರಣ ಮತ್ತು ವಿಯೆಟ್ನಾಂ ಯುದ್ಧದಿಂದ ತತ್ತರಿಸಿದ್ದ ದೇಶಕ್ಕೆ ಪುನಶ್ಚೇತನ ನೀಡುವ ಮಹತ್ವದ ಹೊಣೆಯನ್ನು ಹೊತ್ತುಕೊಂಡರು.
ಸಾರ್ವಜನಿಕ ದೇಣಿಗೆಯಿಂದ ಪ್ರಚಾರ ಅಭಿಯಾನ ಕೈಗೊಂಡ ಕಾರ್ಟರ್, ಪಾರದರ್ಶಕತೆ ಕೇಂದ್ರಿತ ಪ್ರಚಾರದ ಕಾರಣದಿಂದ ಗೆರಾಲ್ರ್ಡ್ ಫೋರ್ಡ್ ವಿರುದ್ಧ ಅಲ್ಪ ಅಂತರದ ಜಯ ಸಾಧಿಸಿದ್ದರು.