“ನಾಗರಿಕರ ಹತ್ಯೆಯನ್ನು ಇಸ್ರೇಲ್ ನಿಲ್ಲಿಸಬೇಕು”: ಗಾಝಾದಲ್ಲಿ ಕದನ ವಿರಾಮ ಘೋಷಿಸುವಂತೆ ಆಗ್ರಹಿಸಿದ ಫ್ರಾನ್ಸ್ ಅಧ್ಯಕ್ಷ
ಪ್ಯಾರಿಸ್: ಗಾಝಾ ಮೇಲಿನ ಬಾಂಬ್ ದಾಳಿ ಹಾಗೂ ನಾಗರಿಕರ ಹತ್ಯೆಯನ್ನು ಇಸ್ರೇಲ್ ನಿಲ್ಲಿಸಬೇಕು ಎಂದು ಶುಕ್ರವಾರ ತಡ ರಾತ್ರಿ BBC ಸುದ್ದಿ ಸಂಸ್ಥೆಯು ಪ್ರಸಾರ ಮಾಡಿರುವ ತಮ್ಮ ಸಂದರ್ಶನದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಆಗ್ರಹಿಸಿದ್ದಾರೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಾಂಬ್ ದಾಳಿಗೆ ಯಾವುದೇ ಸಮರ್ಥನೆಗಳಿಲ್ಲ ಎಂದು ಹೇಳಿರುವ ಮ್ಯಾಕ್ರನ್, ಕದನ ವಿರಾಮದಿಂದ ಇಸ್ರೇಲ್ ಗೆ ಲಾಭವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಹಮಾಸ್ ದಾಳಿಯನ್ನು ಫ್ರಾನ್ಸ್ ಸ್ಪಷ್ಟವಾಗಿ ಖಂಡಿಸುತ್ತದೆ ಎಂದು ಹೇಳಿರುವ ಅವರು, ಇಸ್ರೇಲ್ ನ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿಗೆ ಮಾನ್ಯತೆ ಇದ್ದರೂ, ಗಾಝಾದಲ್ಲಿ ನಡೆಯುತ್ತಿರುವ ಬಾಂಬ್ ದಾಳಿಯನ್ನು ಸ್ಥಗಿತಗೊಳಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿಮ್ಮೊಂದಿಗೆ ಅಮೆರಿಕಾ ಮತ್ತು ಬ್ರಿಟನ್ ಸೇರಿದಂತೆ ಇತರ ದೇಶಗಳ ನಾಯಕರೂ ಕದನ ವಿರಾಮದ ಕರೆಗೆ ದನಿಗೂಡಿಸಬೇಕೆ ಎಂಬ ಪ್ರಶ್ನೆಗೆ “ಅವರು ಹಾಗೆ ಮಾಡುತ್ತಾರೆ ಎಂದು ಭಾವಿಸಿದ್ದೇನೆ” ಎಂದು ಮ್ಯಾಕ್ರನ್ ಉತ್ತರಿಸಿದ್ದಾರೆ.
ಮ್ಯಾಕ್ರನ್ ಹೇಳಿಕೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಾಗತಿಕ ನಾಯಕರು ಹಮಾಸ್ ಅನ್ನು ಖಂಡಿಸಬೇಕೇ ಹೊರತು ಇಸ್ರೇಲ್ ನಲ್ಲ ಎಂದು ತಿರುಗೇಟು ನೀಡಿದ್ದಾರೆ.