ಗ್ರೀಸ್ | ದೋಣಿ ಮುಳುಗಿ ಮೂರು ವಲಸಿಗರ ಮೃತ್ಯು
Update: 2024-09-23 15:51 GMT
ಅಥೆನ್ಸ್ : ಪೂರ್ವ ಏಜಿಯನ್ ದ್ವೀಪ ಸಮೋಸ್‍ನ ಕರಾವಳಿ ಬಳಿ ವಲಸಿಗರಿದ್ದ ದೋಣಿಯೊಂದು ಮುಳುಗಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ. ಇತರ ಐದು ಮಂದಿಯನ್ನು ರಕ್ಷಿಸಲಾಗಿದೆ ಎಂದು ಗ್ರೀಸ್‍ನ ಕರಾವಳಿ ಕಾವಲು ಪಡೆ ಹೇಳಿದೆ.
ದೋಣಿಯಲ್ಲಿ ಎಷ್ಟು ಜನರಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಸಮೋಸ್‍ನ ವಾಯವ್ಯ ಪ್ರದೇಶದಲ್ಲಿ ಕರಾವಳಿ ಭದ್ರತಾ ಪಡೆಯ ಮೂರು ಗಸ್ತು ನೌಕೆಗಳು, ಖಾಸಗಿ ನೌಕೆ ಹಾಗೂ ವಾಯುಪಡೆಯ ಹೆಲಿಕಾಪ್ಟರ್ ಗಳು ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಮೃತಪಟ್ಟವರು ಹಾಗೂ ರಕ್ಷಿಸಲ್ಪಟ್ಟವರು ಯಾವ ದೇಶದವರು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಪ್ರಾಚ್ಯ, ಆಫ್ರಿಕಾ ಮತ್ತು ಏಶ್ಯಾದಲ್ಲಿ ಸಂಘರ್ಷ ಮತ್ತು ಬಡತನದ ಕಾರಣದಿಂದ ಯುರೋಪಿಯನ್ ಒಕ್ಕೂಟಕ್ಕೆ ಪಲಾಯನ ಮಾಡುವ ಜನರಿಗೆ ಗ್ರೀಸ್ ಜಲಮಾರ್ಗ ಅತ್ಯಂತ ಜನಪ್ರಿಯವಾಗಿದೆ.