ವಲಸೆಗಾರರನ್ನು ಮೆಡಿಟರೇರಿಯನ್ ಸಮುದ್ರಕ್ಕೆ ಎಸೆದ ಗ್ರೀಕ್ ಕರಾವಳಿ ರಕ್ಷಕರು!
ಗ್ರೀಕ್ ಕರಾವಳಿ ಕಾವಲುಪಡೆಯವರು ಕಳೆದ ಮೂರು ವರ್ಷಗಳಲ್ಲಿ ಹತ್ತಾರು ಮಂದಿ ವಲಸೆಗಾರರನ್ನು ಮೆಡಿಟರೇಯನ್ ಸಮುದ್ರಕ್ಕೆ ಎಸೆದು ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಈ ಪೈಕಿ ಒಂಬತ್ತು ಮಂದಿಯನ್ನು ಉದ್ದೇಶಪೂರ್ವಕವಾಗಿ ನೀರಿಗೆ ಎಸೆಯಲಾಗಿದೆ ಎಂದು ವರದಿ ವಿವರಿಸಿದೆ.
ಗ್ರೀಕ್ ಜಲಗಡಿಯಿಂದ ಬಲವಂತವಾಗಿ ಹೊರಗೆ ಹಾಕಿದಾಗ ಅಥವಾ ಗ್ರೀಕ್ ದ್ವೀಪ ತಲುಪಿದ ವಲಸಿಗರನ್ನು ವಾಪಾಸು ಸಮುದ್ರಕ್ಕೆ ಕಳುಹಿಸಿದ ಪರಿಣಾಮ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಒಂಬತ್ತು ಮಂದಿಯೂ ಅವರಲ್ಲಿ ಸೇರಿದ್ದಾರೆ ಎಂದು ಬಿಬಿಸಿ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಆದರೆ ಈ ಎಲ್ಲ ಅಕ್ರಮ ಚಟುವಟಿಕೆಗಳ ಆರೋಪವನ್ನು ಗ್ರೀಕ್ ಕರಾವಳಿ ಕಾವಲು ಪಡೆ ನಿರಾಕರಿಸಿದೆ.
ಒಟ್ಟು 12 ಮಂದಿಯನ್ನು ಗ್ರೀಕ್ ಕರಾವಳಿ ಕಾವಲುಪಡೆಯ ನಾವೆಯಲ್ಲಿ ಕರೆದೊಯ್ದು ಪುಟ್ಟ ನಾವೆಯಲ್ಲಿ ಬಿಟ್ಟು ಬರಲಾಗಿದೆ ಎಂದು ಗ್ರೀಕ್ ಕರಾವಳಿ ಕಾವಲು ಪಡೆಯ ಮಾಜಿ ಉನ್ನತಾಧಿಕಾರಿಗಳ ಹೇಳಿಕೆಯ ವಿಡಿಯೊ ತುಣುಕನ್ನು ಬಿಬಿಸಿ ಪ್ರಸಾರ ಮಾಡಿದೆ. ಇದು ಅಕ್ರಮ ಹಾಗೂ ಅಂತರರಾಷ್ಟ್ರೀಯ ಅಪರಾಧ ಎಂದು ಅವರು ಹೇಳಿದ್ದನ್ನು ಬಿಬಿಸಿ ತನಿಖಾ ತಂಡ ದಾಖಲಿಸಿಕೊಂಡಿದೆ.
ಗ್ರೀಕ್ ಸರ್ಕಾರ ವಲಸಿಗರನ್ನು ಅಕ್ರಮವಾಗಿ ಟರ್ಕಿ ಕಡೆಗೆ ವಾಪಾಸು ಕಳುಹಿಸುತ್ತಿದೆ ಎಂಬ ಆರೋಪ ಧೀರ್ಘಕಾಲದಿಂದ ಇದ್ದು, ಇದು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಅಕ್ರಮ. ಗ್ರೀಕ್ ಕರಾವಳಿ ಕಾವಲು ಪಡೆ ಸಿಬ್ಬಂದಿಯ ಕ್ರಮದಿಂದಾಗಿ ಉಂಟಾಗಿರುವ ಸಾವಿನ ಪ್ರಮಾಣವನ್ನು ಅಂದಾಜಿಸಿರುವುದು ಇದೇ ಮೊದಲು.
2020-30ರ ಅವಧಿಯ 15 ಇಂಥ ಪ್ರಕರಣಗಳನ್ನು ನಾವು ವಿಶ್ಲೇಷಣೆಗೆ ಗುರಿಪಡಿಸಿದ್ದು, ಒಟ್ಟು 43 ಸಾವುಗಳು ಸಂಭವಿಸಿವೆ. ಸ್ಥಳೀಯ ಮಾಧ್ಯಮ, ಎನ್‍ಜಿಓ ಹಾಗೂ ಟರ್ಕಿ ಕರಾವಳಿ ಕಾವಲು ಪಡೆ ನಮ್ಮ ಮಾಹಿತಿಯ ಮೂಲ ಎಂದು ಬಿಬಿಸಿ ಸಮರ್ಥಿಸಿಕೊಂಡಿದೆ.