ನಾಲ್ವರು ಇಸ್ರೇಲಿ ಒತ್ತೆಯಾಳುಗಳ ಮೃತದೇಹ ಹಸ್ತಾಂತರಿಸಿದ ಹಮಾಸ್

PC ; aljazeera.com
ಗಾಝಾ: ಮಹಿಳೆ, ಆಕೆಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಇಸ್ರೇಲಿ ಒತ್ತೆಯಾಳುಗಳ ಮೃತದೇಹವನ್ನು ಹಮಾಸ್ ಗುರುವಾರ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಆಕ್ರಮಣ ನಡೆಸಿದ್ದ ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಅಪಹರಿಸಿದ್ದ ಶಿರಿ ಬಿಬಾಸ್ ಹಾಗೂ ಆಕೆಯ ಇಬ್ಬರು ಮಕ್ಕಳಾದ ಆರಿಯಲ್ ಮತ್ತು ಕೆಫಿರ್(ಆಗ 9 ತಿಂಗಳ ಮಗು) ಹಾಗೂ 83 ವರ್ಷದ ಒಡೆಡ್ ಲಿಫ್‍ಶಿಜ್ ಅವರ ಮೃತದೇಹಗಳನ್ನು ಹಮಾಸ್ ಗಾಝಾದಲ್ಲಿ ಹಸ್ತಾಂತರಿಸಿದ್ದು ಇವರು ಗಾಝಾದ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಹಮಾಸ್ ಮೂಲಗಳು ಹೇಳಿವೆ.
ಮೃತದೇಹಗಳ ಹಸ್ತಾಂತರವನ್ನು ಇಸ್ರೇಲಿ ಮಿಲಿಟರಿ ದೃಢಪಡಿಸಿದ್ದು ಡಿಎನ್‍ಎ ಪರೀಕ್ಷೆಯ ಮೂಲಕ ಮೃತರನ್ನು ಅಧಿಕೃತವಾಗಿ ಗುರುತಿಸಲಾಗುವುದು ಎಂದು ಹೇಳಿದೆ. ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸಿರುವುದು ಕದನ ವಿರಾಮದ ಮುಂದಿನ ಹಂತದ ಕುರಿತ ಮಾತುಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.