ಹಮಾಸ್ ಮುಖಂಡರು ಗಾಝಾ ತೊರೆಯಲು ಅವಕಾಶ: ಹೊಸ ಕದನ ವಿರಾಮ ಪ್ರಸ್ತಾವಿಸಿದ ಇಸ್ರೇಲ್: ವರದಿ
ಗಾಝಾ: ಹಮಾಸ್ ನ ಹಿರಿಯ ಮುಖಂಡರು ಗಾಝಾ ತೊರೆಯಲು ಅವಕಾಶ ನೀಡುವ ಹೊಸ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಪ್ರಸ್ತಾವಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಕದನ ವಿರಾಮ ಪ್ರಸ್ತಾಪದ ಈ ಅಂಶವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿದಾಳಿಗೆ ಹಾಗೂ ಗಾಝಾದ ಮೇಲೆ ಮುತ್ತಿಗೆ ಆರಂಭಿಸಲು ಆದೇಶಿಸಿದಾಗ ಪ್ರತಿಪಾದಿಸಿದ್ದ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ವರದಿ ಹೇಳಿದೆ. ಹಮಾಸ್ ಅನ್ನು ಸಂಪೂರ್ಣ ನಾಶಗೊಳಿಸುವುದು ಮತ್ತು ಹಮಾಸ್ ಅಕ್ಟೋಬರ್ 7ರ ರೀತಿಯ ಆಕ್ರಮಣ ಮತ್ತೆ ನಡೆಸದಂತೆ ಖಾತರಿಪಡಿಸುವುದು ತನ್ನ ಗುರಿಯಾಗಿದೆ ಎಂದು ನೆತನ್ಯಾಹು ಘೋಷಿಸಿದ್ದರು. ಆದರೆ ಯುದ್ಧ ಆರಂಭವಾಗಿ 3 ತಿಂಗಳು ಕಳೆದರೂ ಇಸ್ರೇಲ್ ಗೆ ಗಾಝಾದಲ್ಲಿ ಹಮಾಸ್ ನ ಯಾವುದೇ ಹಿರಿಯ ಮುಖಂಡರನ್ನು ಸೆರೆಹಿಡಿಯಲು ಅಥವಾ ಬಂಧಿಸಲು ಸಾಧ್ಯವಾಗಿಲ್ಲ. ಇಸ್ರೇಲ್ ಸ್ವತಃ ಅಂದಾಜಿಸಿರುವಂತೆ, ಹಮಾಸ್ ನ ಸುಮಾರು 70%ದಷ್ಟು ಹೋರಾಟ ಬಲ ಇನ್ನೂ ಹಾಗೆಯೇ ಉಳಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ಹಮಾಸ್ ನ ಪ್ರಮುಖ ಮುಖಂಡರು ಗಾಝಾದಿಂದ ಹೊರತೆರಳಿದರೆ ಆಗ ಗಾಝಾ ಪಟ್ಟಿಯ ಮೇಲಿನ ಹಮಾಸ್ ಹಿಡಿತ ದುರ್ಬಲಗೊಳ್ಳಲಿದೆ ಮತ್ತು ಗಾಝಾ ಹಾಗೂ ವಿದೇಶದಲ್ಲಿ ಹಮಾಸ್ ನ ಪ್ರಮುಖ ನೆಲೆಗಳನ್ನು ಪತ್ತೆಹಚ್ಚುವ ಇಸ್ರೇಲ್ ನ ಕಾರ್ಯವನ್ನು ಸುಲಭಗೊಳಿಸಲಿದೆ. ಗಾಝಾ ಪಟ್ಟಿಯನ್ನು ಹೊರತುಪಡಿಸಿ ಹಮಾಸ್ ಮುಖಂಡರು ಖತರ್ ನ ದೋಹ, ಲೆಬನಾನ್ ನ ಬೈರೂತ್ ಸೇರಿದಂತೆ ಇತರ ಹಲವೆಡೆ ನೆಲೆಯನ್ನು ಹೊಂದಿದ್ದಾರೆ. ಆದರೆ ಈ ಪ್ರಸ್ತಾವನೆಯನ್ನು ಹಮಾಸ್ ಸ್ವೀಕರಿಸುವ ಸಾಧ್ಯತೆಯಿಲ್ಲ ಎಂದು ಸಿಎನ್ಎನ್ ವರದಿ ಹೇಳಿದೆ.
ಡಿಸೆಂಬರ್ನಲ್ಲಿ ಪೋಲ್ಯಾಂಡ್ನ ವಾರ್ಸಾ ಮತ್ತು ಖತರ್ ನ ದೋಹದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಜತೆಗಿನ ಸಭೆಯಲ್ಲಿ ಇಸ್ರೇಲ್ ಗುಪ್ತಚರ ಇಲಾಖೆ ಮೊಸಾದ್ ನ ಮುಖ್ಯಸ್ಥ ಡೇವಿಡ್ ಬಾರ್ನೆಯ್ ಈ ಯೋಜನೆಯನ್ನು ಪ್ರಸ್ತಾವಿಸಿದ್ದರು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಒತ್ತೆಯಾಳುಗಳ ಬಿಡುಗಡೆಗೆ ಹೊಸ ಒಪ್ಪಂದದ ಪ್ರಸ್ತಾಪ
ಈ ಮಧ್ಯೆ, ಖತರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಹೊಸ ಪ್ರಸ್ತಾಪವನ್ನು ಇಸ್ರೇಲ್ ಮುಂದಿರಿಸಿದೆ ಎಂದು ಅಮೆರಿಕದ ಆಕ್ಸಿಯಾಸ್ ಸುದ್ಧಿಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಎರಡು ತಿಂಗಳು ಯುದ್ಧವನ್ನು ಸ್ಥಗಿತಗೊಳಿಸುವುದು, ಈ ಸಂದರ್ಭ ಹಂತಹಂತವಾಗಿ ಒತ್ತೆಯಾಳುಗಳ ಬಿಡುಗಡೆಯ ಯೋಜನೆ ಇದಾಗಿದೆ. ಪ್ರಥಮ ಹಂತದಲ್ಲಿ 60 ವರ್ಷ ಮೀರಿದ ಪುರುಷರು ಮತ್ತು ಮಹಿಳೆಯರು, ತೀವ್ರ ಅಸ್ವಸ್ಥಗೊಂಡ ಒತ್ತೆಯಾಳುಗಳ ಬಿಡುಗಡೆ, ಎರಡನೇ ಹಂತದಲ್ಲಿ ಮಹಿಳಾ ಸೈನಿಕರು, ಪುರುಷ ಸೈನಿಕರು ಮತ್ತು ಯುವಜನರನ್ನು ಬಿಡುಗಡೆಗೊಳಿಸುವುದು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಜೈಲಿನಲ್ಲಿರುವ ಫೆಲೆಸ್ತೀನ್ ಕೈದಿಗಳ ಬಿಡುಗಡೆಯ ಅಂಶವನ್ನು ಈ ಯೋಜನೆ ಹೊಂದಿದೆ ಎಂದು ವರದಿ ಹೇಳಿದೆ.