ಕೆಂಪು ಸಮುದ್ರದಲ್ಲಿ ಹೌದಿಗಳ ದಾಳಿ ನಿಲ್ಲಿಸದಿದ್ದರೆ ವ್ಯಾಪಾರ ಸಂಬಂಧಕ್ಕೆ ಹಾನಿ ; ಇರಾನ್‍ಗೆ ಚೀನಾ ಎಚ್ಚರಿಕೆ
ಬೀಜಿಂಗ್: ಇರಾನ್ ಬೆಂಬಲಿತ ಹೌದಿ ಗುಂಪು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ನಡೆಸುವ ದಾಳಿಯನ್ನು ನಿಲ್ಲಿಸಲು ನೆರವಾಗಬೇಕು. ಇಲ್ಲದಿದ್ದರೆ ಚೀನಾ-ಇರಾನ್ ನಡುವಿನ ವ್ಯಾಪಾರ ಸಂಬಂಧಕ್ಕೆ ಹಾನಿಯಾಗಬಹುದು ಎಂದು ಚೀನಾದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಬೀಜಿಂಗ್ ಮತ್ತು ಟೆಹ್ರಾನ್‍ನಲ್ಲಿ ಉಭಯ ದೇಶಗ ಉನ್ನತ ಮಟ್ಟದ ನಿಯೋಗಗಳ ನಡುವೆ ನಡೆದ ಸಭೆಯಲ್ಲಿ ಹೌದಿಗಳ ದಾಳಿ ಹಾಗೂ ಚೀನಾ-ಇರಾನ್ ವ್ಯಾಪಾರದ ಬಗ್ಗೆ ಚರ್ಚೆ ನಡೆದಿದೆ. `ನಮ್ಮ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾದರೂ ಅದು ಇರಾನ್ ಜತೆಗಿನ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಂಯಮ ವಹಿಸುವಂತೆ ಹೌದಿಗಳಿಗೆ ಸೂಚಿಸಿ' ಎಂದು ಚೀನಾ ನಿಯೋಗ ಸ್ಪಷ್ಟಪಡಿಸಿದೆ ಎಂದು ನಿಯೋಗದಲ್ಲಿದ್ದ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್‍ನ ಉನ್ನತ ಮೂಲಗಳು `ಕೆಂಪು ಸಮುದ್ರದಲ್ಲಿ ಚೀನಾಕ್ಕೆ ಸಂಬಂಧಿಸಿದ ಯಾವುದೇ ಹಡಗುಗಳ ಮೇಲೆ ದಾಳಿ ನಡೆದರೆ ಅಥವಾ ದೇಶದ ಹಿತಾಸಕ್ತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವ ಪ್ರಕ್ರಿಯೆಯಿಂದ ತೀವ್ರ ಅಸಮಾಧಾನವಾಗುತ್ತದೆ ಎಂದು ಚೀನಾ ಸ್ಪಷ್ಟಪಡಿಸಿದೆ' ಎಂದು ಹೇಳಿವೆ.
ಕೆಂಪು ಸಮುದ್ರದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲಿನ ದಾಳಿಯು ಏಶ್ಯಾ ಮತ್ತು ಯುರೋಪ್ ನಡುವಿನ, ಚೀನಾದ ಹಡಗುಗಳು ಹೆಚ್ಚಾಗಿ ಬಳಸುವ ಪ್ರಮುಖ ವ್ಯಾಪಾರ ಮಾರ್ಗಕ್ಕೆ ಅಡ್ಡಿಯಾಗಿದೆ. ಇರಾನ್‍ನ ಮೇಲೆ ಅಮೆರಿಕದ ನಿರ್ಬಂಧದ ಹೊರತಾಗಿಯೂ ಕಳೆದ ವರ್ಷ ಇರಾನ್‍ನ ಕಚ್ಛಾತೈಲ ರಫ್ತಿನ 90%ದಷ್ಟು ಚೀನಾಕ್ಕೆ ಪೂರೈಕೆಯಾಗಿದೆ.