ಜರ್ಮನಿಯಲ್ಲಿ ಭಾರಿ ಹಿಮಪಾತ; ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

Update: 2023-12-03 04:12 GMT

Photo: twitter.com/bloomberg

ಮ್ಯೂನಿಚ್: ದಕ್ಷಿಣ ಜರ್ಮನಿಯಲ್ಲಿ ಶನಿವಾರ ಭಾರೀ ಹಿಮಪಾತವಾಗಿದ್ದು, ಬವಾರಿಯನ್ ರಾಜಧಾನಿ ಮ್ಯೂನಿಚ್ ನಲ್ಲಿ ವಿಮಾನ ಮತ್ತು ರೈಲು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಮ್ಯೂನಿಚ್ ವಿಮಾನ ನಿಲ್ದಾಣವನ್ನು ಶನಿವಾರ ಮಧ್ಯಾಹ್ನದ ವರೆಗೆ ಮುಚ್ಚಲು ನಿರ್ಧರಿಸಲಾಗಿದ್ದು, ಇದನ್ನು ವಿಸ್ತರಿಸಿ ಭಾನುವಾರದ ವರೆಗೆ ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ.

ಒಟ್ಟು 760 ವಿಮಾನಗಳ ಸಂಚಾರಕ್ಕೆ ತಡೆ ಉಂಟಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರ ಎಎಫ್ಪಿಗೆ ತಿಳಿಸಿದ್ದಾರೆ. ಶುಕ್ರವಾರದಿಂದ ಶನಿವಾರದವರೆಗೆ ಒಟ್ಟು 40 ಸೆಂಟಿಮೀಟರ್ ಹಿಮಪಾತವಾಗಿದೆ ಎಂದು ಹವಾಮಾನ ಸೇವಾ ವಿಭಾಗ ಪ್ರಕಟಿಸಿದೆ.

ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ನಾಗರಿಕರು ಮನೆಗಳಲ್ಲೇ ಉಳಿದುಕೊಳ್ಳುವಂತೆ ಅಧಿಕಾರಿಗಳು ಕೋರಿದ್ದಾರೆ. ಈ ಚಳಿಗಾಲದಲ್ಲಿ ರೈಲು ಸಂಚಾರ ಕೂಡಾ ವ್ಯತ್ಯಯವಾಗಿದ್ದು, ಮ್ಯೂನಿಚ್ ನ ಮುಖ್ಯ ನಿಲ್ದಾಣದಲ್ಲಿ ಸೇವೆ ನೀಡುವಂತಿಲ್ಲ ಎಂದು ರೈಲ್ವೆ ನಿರ್ವಾಹಕರು ಹೇಳಿದ್ದಾರೆ. 

ಪ್ರಯಾಣಿಕರು ಈ ಭಾಗದ ರೈಲುಗಳು ವಿಳಂಬವಾಗುವ ಮತ್ತು ರದ್ದಾಗುವ ಸಾಧ್ಯತೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಮ್ಯೂನಿಚ್ ನಲ್ಲಿ ಉಪನಗರ ರೈಲು ಸೇವೆ ಮತ್ತು ಬಹುತೇಕ ಬಸ್ ಸೇವೆ ಕೂಡಾ ಸ್ಥಗಿತಗೊಂಡಿದೆ.

ಬೆಯೆರ್ನ್ ಮ್ಯೂನಿಚ್ ಮತ್ತು ಯೂನಿಯಲ್ ಬರ್ಲಿನ್ ನಡುವಿನ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯವನ್ನೂ ರದ್ದುಪಡಿಸಲಾಗಿದೆ.

350 ಕಡೆಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಿದ್ದು, ಕಾರು ಅಪಘಾತ ಪ್ರಕರಣಗಳಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಹಲವು ದಿನಗಳಿಂದ ಮ್ಯೂನಿಚ್ ನಲ್ಲಿ ಹಿಮಪಾತ ಮತ್ತು ಮೈಕೊರೆಯುವ ಚಳಿಯ ವಾತಾವರಣ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News