“ನಾನು ಧರಿಸುವುದನ್ನು ಆಯ್ಕೆ ಮಾಡಲು ನಾನು ನಿಮಗೆ ಅವಕಾಶ ನೀಡುವುದಿಲ್ಲ”

ಭಾರತೀಯ ಟಿವಿ ನಿರೂಪಕಿ ಶ್ರೇಯಾ ಧೌಂಡಿಯಲ್ ಅವರು ತಮ್ಮ ಇಸ್ರೇಲಿ ಅತಿಥಿ, ಇಸ್ರೇಲಿ ಇಂಟೆಲ್ ವಿಶೇಷ ಪಡೆಗಳ ಸದಸ್ಯ ಫ್ರೆಡ್ರಿಕ್ ಲ್ಯಾಂಡೌ ಅವರಿಂದ ತಮ್ಮ ಉಡುಪಿನ ಆಯ್ಕೆಯ ಬಗ್ಗೆ ಟೀಕೆಗಳನ್ನು ಎದುರಿಸಿದ ಘಟನೆ ವರದಿಯಾಗಿದೆ.

Update: 2023-10-24 18:52 GMT

PHOTO : videograb

ಹೊಸದಿಲ್ಲಿ : ಭಾರತೀಯ ಟಿವಿ ನಿರೂಪಕಿ ಶ್ರೇಯಾ ಧೌಂಡಿಯಲ್ ಅವರು ತಮ್ಮ ಇಸ್ರೇಲಿ ಅತಿಥಿ, ಇಸ್ರೇಲಿ ಇಂಟೆಲ್ ವಿಶೇಷ ಪಡೆಗಳ ಸದಸ್ಯ ಫ್ರೆಡ್ರಿಕ್ ಲ್ಯಾಂಡೌ ಅವರಿಂದ ತಮ್ಮ ಉಡುಪಿನ ಆಯ್ಕೆಯ ಬಗ್ಗೆ ಟೀಕೆಗಳನ್ನು ಎದುರಿಸಿದ ಘಟನೆ ವರದಿಯಾಗಿದೆ.

ಮಿರರ್ ನೌ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕಿ ಧೌಂಡಿಯಾಲ್, ಅವರು ಆನ್‌ ಏರ್‌ ನಲ್ಲಿ ತಮ್ಮ ಅಜ್ಜಿಯ ಹಸಿರು ಮತ್ತು ಕೆಂಪು ಸೀರೆಯನ್ನು ಧರಿಸಿದ್ದರು. ಫೆಲೆಸ್ತೀನ್ ಧ್ವಜದ ಬಣ್ಣಗಳನ್ನು ಗಮನಿಸಿದ ಲ್ಯಾಂಡೌ, ಧೌಂಡಿಯಲ್ ಫೆಲೆಸ್ತೀನ್‌ಗೆ ಸಂಬಂಧಿಸಿದ ಬಣ್ಣಗಳನ್ನು ಧರಿಸಿದ್ದರು ಎಂದು ಲೈವ್‌ ನಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಧೌಂಡಿಯಲ್, “ಧರ್ಮದ ಆಧಾರದ ಮೇಲೆ ಬಣ್ಣಗಳನ್ನು ವಿಭಜಿಸಬಾರದು, ಫ್ರೆಡ್ರಿಕ್. ಇದು ಕೆಲವೊಮ್ಮೆ ನನ್ನ ದೇಶದಲ್ಲಿಯೂ ನಡೆಯುತ್ತದೆ. ನಾನು ಉಟ್ಟಿರುವ ಉಡುಪು, ಸೀರೆ. ಇದು ನನ್ನ ಅಜ್ಜಿಯದು. ಅವಳು ಬದುಕಿದ್ದರೆ ಇಂದು ಆಕೆಗೆ 105 ವರ್ಷ ವಯಸ್ಸಾಗುತ್ತಿತ್ತು. ಇಸ್ರೇಲ್-ಹಮಾಸ್ ಸಂಘರ್ಷ ಏನೆಂದು ಆಕೆಗೆ ತಿಳಿದಿರಲಿಲ್ಲ” ಎಂದು ತನ್ನ ಬಟ್ಟೆಯ ಆಯ್ಕೆಗಳನ್ನು ನಿರ್ದೇಶಿಸುವ ಲ್ಯಾಂಡೌನ ಪ್ರಯತ್ನವನ್ನು ಅವರು ವಿರೋಧಿಸಿದರು. ಜೊತೆಗೆ ತಾನು ಇಷ್ಟಪಡುವದನ್ನು ಧರಿಸುವ ಹಕ್ಕನ್ನು ಪ್ರತಿಪಾದಿಸಿದರು. ಏನು ಧರಿಸಬೇಕು, ಏನು ಹೇಳಬೇಕು ಎಂಬುದು ನನ್ನ ಆಯ್ಕೆ ಎಂದರು.

ತನ್ನ ಸಾಮಾಜಿಕ ಮಾಧ್ಯಮದಲ್ಲಿ, ಕಾರ್ಯಕ್ರಮದ ಕ್ಲಿಪ್ ಅನ್ನು ಪೋಸ್ಟ್ ಮಾಡಿರುವ ಧೌಂಡಿಯಲ್, “ನನ್ನ ಪ್ರೀತಿಯ ಅಗಲಿದ ಅಜ್ಜಿಯ ಸೀರೆಯು ಇಂದು ಸಂಜೆ ಇಸ್ರೇಲ್‌ನಿಂದ ನನ್ನ ಅತಿಥಿಯನ್ನು ಅಸಮಾಧಾನಗೊಳಿಸಿತು. ಒಂದು ಬಾರಿ ನನಗೆ ಪದಗಳೇ ಇಲ್ಲವಾಯಿತು” ಎಂದು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News