ಪಾಕ್ ಸರಕಾರದ ಅಧಿಕಾರಿಗಳು ದಂಗೆಯೇಳಲು ಇಮ್ರಾನ್ ಕುಮ್ಮಕ್ಕು : ಎಫ್‌ಐಎ ಆರೋಪ

Update: 2024-09-14 16:46 GMT

ಇಮ್ರಾನ್‌ ಖಾನ್‌ (Photo: PTI)

ಇಸ್ಲಾಮಾಬಾದ್ : ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡುವ ಮೂಲಕ ಸರಕಾರಿ ಅಧಿಕಾರಿಗಳು ದಂಗೆಯೇಳುವುದಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ)ಯು ಪ್ರಕರಣವನ್ನು ದಾಖಲಿಸಿದೆ.

ಬಂಧನದಲ್ಲಿರುವ ಇಮ್ರಾನ್ ಖಾನ್ ಅವರನ್ನು ಈ ಆರೋಪಕ್ಕೆ ಸಂಬಂಧಿಸಿ ಪ್ರಶ್ನಿಸಲು ತನಿಖಾಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರನ್ನು ಒಳಗೊಂಡ ಎಫ್‌ಐಎ ತಂಡವು ಶನಿವಾರ ಅಡಿಯಾಲ ಜೈಲಿಗೆ ಭೇಟಿ ನೀಡಿದೆ. ಸರಕಾರಿ ಅಧಿಕಾರಿಗಳಿಗೆ ದಂಗೆಯೇಳಲು ಪ್ರಚೋದನೆ ನೀಡಿದ ಆರೋಪದಲ್ಲಿ ಇಮ್ರಾನ್ ವಿರುದ್ಧ ಎಫ್‌ಐಎ ಪ್ರಕರಣವನ್ನು ದಾಖಲಿಸಿದೆಯೆಂದು ಡಾನ್ ದಿನಪತ್ರಿಕೆ ವರದಿ ಮಾಡಿದೆ.

ಆದರೆ ತನ್ನ ನ್ಯಾಯವಾದಿಗಳ ಅನುಪಸ್ಥಿತಿಯಲ್ಲಿ ತಾನು ತನಿಖೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು 71 ವರ್ಷದ ಇಮ್ರಾನ್ ಖಾನ್ ಅವರು ಪಟ್ಟುಹಿಡಿದಿದ್ದರಿಂದ, ತನಿಖಾಧಿಕಾರಿಗಳು ಬರಿಗೈಯಲ್ಲಿ ವಾಪಸಾಗಿದ್ದಾರೆಂದು ವರದಿಗಳು ತಿಳಿಸಿವೆ.

ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ ಪಕ್ಷದ ಸಂಸ್ಥಾಪಕರೂ ಆದ ಇಮ್ರಾನ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆಯ ಬಗ್ಗೆ ಎಫ್‌ಐಎ ತನಿಖೆ ನಡೆಸಲಿದೆಯೆಂದು ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಅತುವುಲ್ಲಾ ತರಾರ್ ಅವರು ತಿಳಿಸಿದ್ದಾರೆ. ಇಮ್ರಾನ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ದೇಶದಲ್ಲಿ ಅರಾಜಕತೆ ಹಾಗೂ ಅವ್ಯವಸ್ಥೆಯನ್ನು ಸೃಷ್ಟಿಸಲು ಹಾಗೂ ರಾಷ್ಟ್ರದ ಭದ್ರತೆಯನ್ನು ದುರ್ಬಲಗೊಳಿಸಲು ಬಳಸಲಾಗುತ್ತಿದೆಯೆಂದು ಎಂದು ಅವರು ಆಪಾದಿಸಿದ್ದಾರೆ.

ಇಮ್ರಾನ್‌ರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಯಾರು ನಿರ್ವಹಿಸುತ್ತಾರೆಂಬುದನ್ನು ದೃಢಪಡಿಸಿಕೊಳ್ಳಬೇಕಾಗಿದೆ . ಈ ಪೋಸ್ಟ್‌ಗಳನ್ನು ಇಮ್ರಾನ್ ಅವರ ಕುಮ್ಮಕ್ಕಿನಿಂದ ಮಾಡಲಾಗುತ್ತಿತ್ತೇ ಅಥವಾ ಬೇರೊಬ್ಬರ ನಿರ್ದೇಶನದಿಂದ ಮಾಡಲಾಗಿತ್ತೇ ಎಂಬುದನ್ನು ದೃಢಪಡಿಸಿಕೊಳ್ಳಲಾಗುತ್ತಿದೆ ಎಂದು ತರಾರ್ ಹೇಳಿದರು.

ಹಾಲಿ ಮುಖ್ಯ ನ್ಯಾಯಾಧೀಶರು ಹಾಗೂ ಇತರ ಸಂಸ್ಥೆಗಳ ವರಿಷ್ಠರ ವಿರುದ್ಧ ಸಂಚುಗಳನ್ನು ಹೂಡುವ ಮೂಲಕ ವಿಫಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಪೋಸ್ಟ್‌ ಗಳ ಮೂಲಕ ಇಮ್ರಾನ್ ಅವರು ದೇಶದ ಎರಡು ಪ್ರಮುಖ ಸಂಸ್ಥೆಗಳ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆಂದು ತರಾರ್ ಆಪಾದಿಸಿದ್ದಾರೆ. ಶುಕ್ರವಾರ ಇಮ್ರಾನ್ ಖಾನ್ ಅವರು ಎಕ್ಸ್‌ ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ ಸೇನಾ ವರಿಷ್ಠ ಆಸೀಮ್ ಮುನೀರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಅಧಿಕಾರದಲ್ಲಿ ಉಳಿದುಕೊಳ್ಳುವುದಕ್ಕಾಗಿ ಓರ್ವ ವ್ಯಕ್ತಿ ಇಡೀ ದೇಶವನ್ನೇ ಒತ್ತೆಯಿರಿಸಿದ್ದಾನೆ ಎಂದು ಹೇಳಿದ್ದಾರೆ.

1971ರ ಬಾಂಗ್ಲಾ ವಿಮೋಚನಾ ಸಮರದಲ್ಲಿ 90 ಸಾವಿರಕ್ಕೂ ಅಧಿಕ ಪಾಕ್ ಸೈನಿಕರು ಯುದ್ದಕೈದಿಗಳಾದ ಘಟನೆಯನ್ನು ಇಮ್ರಾನ್ ತನ್ನ ಪೋಸ್ಟ್‌ ನಲ್ಲಿ ಪ್ರಸ್ತಾವಿಸಿದ್ದರು. ಬಾಂಗ್ಲಾ ಸಮರದಲ್ಲಿ 50 ಸಾವಿರ ಅಮಾಯಕ ಜೀವಗಳು ಬಲಿಯಾದುದನ್ನು ಆಗಿನ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರು ಖುದ್ದಾಗಿ ಒಪ್ಪಿಕೊಂಡಿದ್ದರು ಎಂದು ಅವರು ಹೇಳಿದ್ದರು.

ಇಂದಿಗೂ ಕೂಡಾ ಆ ಕಥೆಯು ಪುನಾರವರ್ತನೆಯಾಗುತ್ತಿದೆ. ಇಂದು ಮತ್ತೊಮ್ಮೆ ಓರ್ವ ವ್ಯಕ್ತಿಯು ಇಡೀ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಅಧಿಕಾರದಲ್ಲಿ ದೀರ್ಘಕಾಲ ಉಳಿಯಲು ಹಾಗೂ ಅಧಿಕಾರದ ಮೇಲಿನ ತನ್ನ ಹಿಡಿತವನ್ನು ಬಲಪಡಿಸಲು ಆತ ವ್ಯವಸ್ಥೆಯನ್ನು ನಾಶಪಡಿಸುತ್ತಿದ್ದಾನೆ’’ ಎಂದು ಇಮ್ರಾನ್ ಎಕ್ಸ್‌ ನಲ್ಲಿ ಬರೆದಿದ್ದರು.ಇಂತಹವರ ಪ್ರಭಾವದಿಂದ ಈವರೆಗೆ ಮುಕ್ತವಾಗಿದ್ದ ಸುಪ್ರೀಂಕೋರ್ಟ್ ಕೂಡಾ ಈಗ ದಾಳಿಗೊಳಗಾಗುತ್ತಿದೆ ಎಂದು ಇಮ್ರಾನ್ ಎಕ್ಸ್‌ ನಲ್ಲಿ ಮಾಡಿದ ಪೋಸ್ಟ್‌ ನಲ್ಲಿ ಆಪಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News