ಪ್ರತಿಭಟನೆಗೆ ಜೈಶಂಕರ್ ರನ್ನು ಆಹ್ವಾನಿಸಿಲ್ಲ : ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷದ ಸ್ಪಷ್ಟನೆ

Update: 2024-10-06 15:40 GMT

ಸಾಂದರ್ಭಿಕ ಚಿತ್ರ | PC : NDTV

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಿಟಿಐ ಪಕ್ಷ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಕ್ಷದ ಮುಖಂಡ ನೀಡಿರುವ ಹೇಳಿಕೆಯಿಂದ ಪಿಟಿಐ ಪಕ್ಷ ಅಂತರ ಕಾಯ್ದುಕೊಂಡಿದೆ.

ಜೈಲಿನಲ್ಲಿರುವ ಇಮ್ರಾನ್‍ಖಾನ್ ಅವರ ಬಿಡುಗಡೆಗೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಇಸ್ಲಮಾಬಾದ್ ಹಾಗೂ ಲಾಹೋರ್ ನಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದ್ದು ಇದರಲ್ಲಿ ಪಾಲ್ಗೊಳ್ಳುವಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ರನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಮುಖಂಡ ಮುಹಮ್ಮದ್ ಆಲಿ ಸೈಫ್ ಹೇಳಿದ್ದಾರೆ ಎಂದು ಶನಿವಾರ ವರದಿಯಾಗಿದ್ದು ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು.

ರವಿವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಟಿಐ ಪಕ್ಷದ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಖಾನ್ ` ಪಿಟಿಐ ಪಕ್ಷದ ರಾಜಕೀಯ ಹೋರಾಟದಲ್ಲಿ ಭಾರತ ಸೇರಿದಂತೆ ಯಾವುದೇ ವಿದೇಶದ ಪಾತ್ರವಿಲ್ಲ. ಭಾರತದ ಕುರಿತಂತೆ ಪಾಕಿಸ್ತಾನದ 70 ವರ್ಷದ ನೀತಿ ಪಿಟಿಐ ಪಕ್ಷದ ಬೆನ್ನೆಲುಬಾಗಿದೆ. ಶಾಂತರೀತಿಯ ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು. ಭಾರತ ಸೇರಿದಂತೆ ಯಾವುದೇ ವಿದೇಶಿ ಗಣ್ಯರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪಿಟಿಐ ಆಹ್ವಾನ ನೀಡಿಲ್ಲ. ನಮ್ಮ ಆಂತರಿಕ ವಿಷಯಗಳಲ್ಲಿ ಪ್ರತಿಕ್ರಿಯೆ ನೀಡಲು ಯಾವುದೇ ವಿದೇಶಿ ಗಣ್ಯರಿಗೆ ಅವಕಾಶವಿಲ್ಲ. ಪಕ್ಷದ ಹೋರಾಟವು ಆಂತರಿಕ ಸಮಸ್ಯೆಯಾಗಿದ್ದು ಇದರಲ್ಲಿ ಜೈಶಂಕರ್ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ಸೈಫ್ ಅವರ ಹೇಳಿಕೆಯು ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿದೆ' ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News