ಇರಾನ್ ಕಮಾಂಡರ್ ಶುಕ್ರವಾರದಿಂದ ನಾಪತ್ತೆ : ವರದಿ
ಟೆಹ್ರಾನ್ : ಇರಾನ್‍ನ ರೆವೊಲ್ಯುಷನರಿ ಗಾಡ್ರ್ಸ್ ಕಾಪ್ರ್ಸ್(ಐಆರ್‍ಜಿಸಿ) ಕಡ್ಸ್ ಪಡೆಯ ಕಮಾಂಡರ್ ಇಸ್ಮಾಯಿಲ್ ಖಾನಿ ಶುಕ್ರವಾರ ಲೆಬನಾನ್‍ನ ಬೈರುತ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ಬಳಿಕ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಇಸ್ಮಾಯಿಲ್ ಖಾನಿ ಎಲ್ಲಿದ್ದಾರೆ ಎಂಬ ಬಗ್ಗೆ ಇರಾನ್‍ನ ಮಾಧ್ಯಮಗಳು ಮೌನ ವಹಿಸಿದ್ದರೆ, ಟರ್ಕಿ ಹಾಗೂ ಇಸ್ರೇಲ್‍ನ ಕೆಲವು ಮಾಧ್ಯಮಗಳು ಖಾನಿ ಮೃತಪಟ್ಟಿರಬಹುದು ಎಂದು ಪ್ರತಿಪಾದಿಸಿವೆ.
ಶುಕ್ರವಾರ ಬೈರುತ್‍ನ ದಕ್ಷಿಣ ಉಪನಗರ ದಹಿಯೆಹ್‍ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ಬಳಿಕ ಹಿಜ್ಬುಲ್ಲಾದ ನೂತನ ಮುಖಂಡ ಹಶೆಮ್ ಸಫಿಯುದ್ದೀನ್ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿತ್ತು. ಈ ದಾಳಿಯ ಸಂದರ್ಭ ಸಫಿಯುದ್ದೀನ್ ಜತೆ ಇಸ್ಮಾಯಿಲ್ ಖಾನಿ ಮಾತುಕತೆ ನಡೆಸುತ್ತಿದ್ದರು ಮತ್ತು ದಾಳಿಯಿಂದ ಗಾಯಗೊಂಡಿರಬಹುದು ಎಂದು ಇಸ್ರೇಲ್‍ನ ಎನ್12 ನ್ಯೂಸ್ ವರದಿ ಮಾಡಿದೆ.
ಲೆಬನಾನ್ ಅಧಿಕಾರಿಗಳು ಖಾನಿಯ ಸಾವನ್ನು ದೃಢಪಡಿಸಿದ್ದಾರೆ ಎಂದು ಇಸ್ರೇಲ್‍ನ ಮತ್ತೊಂದು ಟಿವಿ ಚಾನೆಲ್ ವರದಿ ಮಾಡಿದ್ದರೆ, ಇಸ್ರೇಲ್‍ನ ಪ್ರತಿದಾಳಿಯ ಭೀತಿಯಿಂದ ಖಾನಿಯನ್ನು ಹೆಚ್ಚಿನ ಕಣ್ಗಾವಲಿನಲ್ಲಿ ಇರಿಸಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ. ಇಸ್ರೇಲ್‍ನ ಗುಪ್ತಚರ ಏಜೆನ್ಸಿ ಮೊಸಾದ್ ಪರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಶಂಕೆಯಲ್ಲಿ ಇರಾನ್ ಆಡಳಿತ ಖಾನಿಗೆ ಮರಣದಂಡನೆ ವಿಧಿಸಿರಬಹುದು ಎಂದು ಸೌದಿ ಅರೆಬಿಯಾದ ಕೆಲವು ನ್ಯೂಸ್ ಚಾನೆಲ್‍ಗಳು ವರದಿ ಮಾಡಿವೆ.
ಇರಾಕ್‍ನ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 2020ರ ಜನವರಿಯಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಖಾಸಿಮ್ ಸುಲೇಮಾನಿ ಸ್ಥಾನದಲ್ಲಿ ಇಸ್ಮಾಯಿಲ್ ಖಾನಿ ನೇಮಕಗೊಂಡಿದ್ದರು.