ಇರಾನ್ | ಸೋಮವಾರ ಬೆಳಗ್ಗಿನವರೆಗೆ ಎಲ್ಲಾ ವಿಮಾನ ಹಾರಾಟ ರದ್ದು
ಟೆಹ್ರಾನ್ : ಇರಾನ್ ಸೋಮವಾರ ಬೆಳಿಗ್ಗೆ ತನಕ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇರಾನ್‌ನ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರರು ಸರ್ಕಾರಿ ಸ್ವಾಮ್ಯದ IRNA ಸುದ್ದಿ ಸಂಸ್ಥೆಗೆ ಈ ಮಾಹಿತಿ ನೀಡಿದ್ದಾರೆ.
ದೇಶದ ವಿಮಾನ ನಿಲ್ದಾಣಗಳಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ವಿಮಾನಗಳ ಹಾರಾಟ ನಿಲ್ಲಿಸಲಾಗುವುದು ಎಂದು ವಕ್ತಾರರರು ದೃಢಪಡಿಸಿದ್ದಾರೆ.
ಅಲ್ಲದೇ ರಾಜಧಾನಿಯ ಎರಡು ಪ್ರಮುಖ ಟೆಹ್ರಾನ್‌ನ ತೋಹಿದ್ ಮತ್ತು ರೆಸಾಲಾಟ್ ಸುರಂಗಗಳನ್ನು ಮಧ್ಯರಾತ್ರಿಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಮುಚ್ಚಲಾಗುತ್ತದೆ.
ಇಸ್ರೇಲ್ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಮೇಲೆ ದಾಳಿಯ ಮಾಡುತ್ತೇವೆ ಎಂದು ಇಸ್ರೇಲ್ ಹೇಳುತ್ತಿರುವುದರ ಮಧ್ಯೆ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ರವಿವಾರ ಮುಂಜಾನೆ, ಇರಾನ್ ತೈಲ ಸಚಿವ ಮೊಹ್ಸೆನ್ ಪಕ್ನೆಝಾದ್ ಅವರು ಖಾರ್ಗ್‌ನಲ್ಲಿರುವ ದೇಶದ ಅತಿದೊಡ್ಡ ತೈಲ ಘಟಕಗಳಿಗೆ ಭೇಟಿ ನೀಡಿದ್ದರು. ಘಟಕದ ಭದ್ರತೆಯನ್ನು ಪರಿಶೀಲಿಸಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಉನ್ನತ ಮಿಲಿಟರಿ ಕಮಾಂಡರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.