ಇರಾನ್: ಉಪಗ್ರಹ ಉಡಾವಣೆ ಯಶಸ್ವಿ

Iran: Satellite launch successful

Update: 2024-01-20 15:45 GMT
Photo:NDTV

ಟೆಹ್ರಾನ್: ಇರಾನ್ ಶನಿವಾರ ಸೊರಯ್ಯ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು ಇದು ಸುಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗಾರ್ಥ ಪರೀಕ್ಷೆಗೆ ಸಂಬಂಧಿಸಿದ ಯೋಜನೆಯಾಗಿರಬಹುದು ಎಂದು ಪಾಶ್ಚಿಮಾತ್ಯ ದೇಶಗಳು ಹೇಳಿವೆ.

ಇರಾನ್ ಮತ್ತು ಪಾಕಿಸ್ತಾನಗಳ ನಡುವೆ ದಾಳಿ-ಪ್ರತಿದಾಳಿಯ ಪ್ರಕರಣ ನಡೆದ ಸಂದರ್ಭದಲ್ಲೇ ಇರಾನ್‍ನಿಂದ ಮಹತ್ವದ ಘೋಷಣೆ ಹೊರಬಿದ್ದಿದೆ.

ಮೂರು ಹಂತದ ಕ್ವಾಯೆಂ 100 ರಾಕೆಟ್‍ಗಳೊಂದಿಗೆ ಸೊರಯ್ಯ ಉಪಗ್ರಹವನ್ನು ಭೂಮಿಯ ಮೇಲ್ಮೈಗಿಂತ ಸುಮಾರು 760 ಕಿ.ಮೀ ಮೇಲಿನ ಕಕ್ಷೆಯಲ್ಲಿ ಇರಿಸಲಾಗಿದೆ. ಇದು ರೆವೊಲ್ಯೂಷನರಿ ಗಾಡ್ರ್ಸ್(ಭದ್ರತಾ ಪಡೆ)ನ ಬಾಹ್ಯಾಕಾಶ ಯೋಜನೆಯ ಜತೆ ಇರಾನ್‌ ನ ನಾಗರಿಕ ಬಾಹ್ಯಾಕಾಶ ಯೋಜನೆಯ ಜಂಟಿ ಉಪಕ್ರಮವಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ. ಇರಾನ್ ನ ಉಪಗ್ರಹ ಉಡಾವಣೆಯು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧವನ್ನು ಉಲ್ಲಂಘಿಸುತ್ತದೆ ಎಂದು ಅಮೆರಿಕ ಈ ಹಿಂದೆ ಖಂಡಿಸಿತ್ತು ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆ ನಡೆಸುವುದಿಲ್ಲ ಎಂದು ಇರಾನ್ ವಾಗ್ದಾನ ನೀಡಬೇಕೆಂದು ಆಗ್ರಹಿಸಿತ್ತು. ಇರಾನ್‌ ನ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆ ನಿರ್ಬಂಧದ ಸಿಂಧುತ್ವ ಕಳೆದ ಅಕ್ಟೋಬರ್ ನಲ್ಲಿ ಕೊನೆಗೊಂಡಿದೆ.

ಉಪಗ್ರಹ ಉಡಾವಣಾ ವ್ಯವಸ್ಥೆಯ ಅಭಿವೃದ್ಧಿಯು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯ ಅವಧಿಯನ್ನು ಕಡಿಮೆಗೊಳಿಸಲಿದೆ, ಯಾಕೆಂದರೆ ಎರಡಕ್ಕೂ ಒಂದೇ ರೀತಿಯ ತಂತ್ರಜ್ಞಾನ ಅನ್ವಯಿಸುತ್ತದೆ ಎಂದು ಅಮೆರಿಕದ ಗುಪ್ತಚರ ವಿಭಾಗದ 2023ರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬಳಸಬಹುದು. ಜಾಗತಿಕ ಶಕ್ತಿಗಳ ಜತೆಗಿನ ಪರಮಾಣು ಒಪ್ಪಂದ ಮುರಿದುಬಿದ್ದ ಬಳಿಕ ಇರಾನ್ ಶಸ್ತ್ರಾಸ್ತ್ರ ದರ್ಜೆಯ ಮಟ್ಟದ ಯುರೇನಿಯಂ ಅನ್ನು ಉತ್ಪಾದಿಸುತ್ತಿದೆ. ಈಗ ಇರಾನ್ ಬಳಿ ಹಲವು ಪರಮಾಣು ಶಸ್ತ್ರಾಸ್ತ್ರ ಉತ್ಪಾದಿಸುವಷ್ಟು ಸಂಸ್ಕರಿಸಿದ ಯುರೇನಿಯಂ ಸಂಗ್ರಹವಿದೆ ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(ಐಎಇಎ) ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News