ಇರಾನ್‍ನ ಪರಮಾಣು ವ್ಯವಸ್ಥೆ ಮೇಲೆ ಸೈಬರ್ ದಾಳಿ ; ಸೂಕ್ಷ್ಮ ಮಾಹಿತಿಗೆ ಕನ್ನ : ವರದಿ

Update: 2024-10-12 14:37 GMT

ಇರಾನ್‍ನ ಪರಮಾಣು ಸ್ಥಾವರ  | PC : AP

ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಂಡಿರುವ ನಡುವೆಯೇ ಇರಾನ್ ಶನಿವಾರ ಭಾರೀ ಸೈಬರ್ ದಾಳಿಗೆ ಒಳಗಾಗಿದ್ದು ಸರಕಾರದ ಮೂರು ಪ್ರಮುಖ ಶಾಖೆಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದೆ. ಪರಮಾಣು ಸ್ಥಾವರಗಳೂ ಸೈಬರ್ ದಾಳಿಯ ಗುರಿಯಾಗಿದ್ದವು ಎಂದು ವರದಿಯಾಗಿದೆ.

ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ 200ಕ್ಕೂ ಅಧಿಕ ಕ್ಷಿಪಣಿಗಳ ಮಳೆಗರೆದ ಇರಾನ್ ಕ್ರಮಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿರುವ ಸಂದರ್ಭದಲ್ಲೇ ಈ ಸೈಬರ್ ದಾಳಿ ವರದಿಯಾಗಿದೆ.

`ಇರಾನ್ ಸರಕಾರದ ಎಲ್ಲಾ ಮೂರು ಶಾಖೆಗಳು- ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳು ಭಾರೀ ಸೈಬರ್ ದಾಳಿಗೆ ಒಳಗಾಗಿವೆ ಮತ್ತು ಅವುಗಳ ಮಾಹಿತಿಯನ್ನು ಕದಿಯಲಾಗಿದೆ. ನಮ್ಮ ಪರಮಾಣು ವ್ಯವಸ್ಥೆಗಳನ್ನೂ ಗುರಿಯಾಗಿಸಲಾಗಿದೆ. ಇಂಧನ ವಿತರಣೆ, ಪುರಸಭೆಯ ಜಾಲಗಳು, ಸಾರಿಗೆ ಜಾಲಗಳು, ಬಂದರು ಜಾಲಗಳೂ ದಾಳಿಗೆ ಗುರಿಯಾಗಿವೆ ಎಂದು ಇರಾನ್‍ನ `ಸುಪ್ರೀಂ ಕೌನ್ಸಿಲ್ ಆಫ್ ಸೈಬರ್‍ಸ್ಪೇಸ್'ನ ಮಾಜಿ ಕಾರ್ಯದರ್ಶಿ ಫಿರೌಜಾಬಾದಿಯನ್ನು ಉಲ್ಲೇಖಿಸಿ `ದಿ ಇರಾನ್ ಇಂಟರ್‍ನ್ಯಾಷನಲ್' ವರದಿ ಮಾಡಿದೆ.

ಈ ಮಧ್ಯೆ, ಎಲೆಕ್ಟ್ರಾನಿಕ್ ಸಂವಹನ ಸಾಧನಗಳಾದ ಪೇಜರ್ ಗಳು, ವಾಕಿ-ಟಾಕಿಗಳನ್ನು ವಿಮಾನಗಳ ಕ್ಯಾಬಿನ್‍ಗಳಿಗೆ ಅಥವಾ ತಪಾಸಣೆಗೊಂಡ ಲಗೇಜ್‍ಗಳಲ್ಲಿ ತರುವುದನ್ನು ನಿಷೇಧಿಸಿರುವುದಾಗಿ ಇರಾನ್‍ನ ನಾಗರಿಕ ವಿಮಾನಯಾನ ಸಂಸ್ಥೆ ಶನಿವಾರ ಘೋಷಿಸಿದ್ದು ಮೊಬೈಲ್ ಫೋನ್‍ಗಳಿಗೆ ಮಾತ್ರ ಅನುಮತಿಸಲಾಗಿದೆ ಎಂದು ಹೇಳಿದೆ. ಅಲ್ಲದೆ, ಭವಿಷ್ಯದಲ್ಲಿ ಇಸ್ರೇಲ್‍ನ ಯಾವುದೇ ದಾಳಿಗೆ ಸಂಭಾವ್ಯ ಪ್ರತಿಕ್ರಿಯೆಯ ಬಗ್ಗೆ ಯುರೋಪಿಯನ್ ಮಧ್ಯವರ್ತಿಗಳ ಮೂಲಕ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಇಸ್ರೇಲ್ ದಾಳಿ ಮಾಡಿದರೆ ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಸನ್ನದ್ಧವಾಗಿರುವುದಾಗಿ ಇರಾನ್ ಘೋಷಿಸಿದೆ.

ಇರಾನ್‍ನ ಕ್ಷಿಪಣಿಗಳನ್ನು ರಶ್ಯಕ್ಕೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಸಂಪರ್ಕ ಹೊಂದಿರುವ ಇರಾನ್‍ನ ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ನಿರ್ಬಂಧ ಜಾರಿಗೊಳಿಸಲು ಯೋಜಿಸಿರುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ. ಇಸ್ರೇಲ್ ಪಡೆಗಳು ಲೆಬನಾನ್ ಮತ್ತು ಗಾಝಾದಲ್ಲಿ ಕಾರ್ಯಾಚರಣೆ ತೀವ್ರಗೊಳಿಸುತ್ತಿರುವಂತೆಯೇ ಶನಿವಾರ ಇಸ್ರೇಲ್‍ನತ್ತ ಸರಣಿ ಕ್ಷಿಪಣಿ ಪ್ರಯೋಗಿಸಲಾಗಿದೆ. ಹೈಫಾ ನಗರದ ದಕ್ಷಿಣದಲ್ಲಿರುವ ಸುಡುಮದ್ದು ಪ್ಯಾಕ್ಟರಿಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ. ಈ ಮಧ್ಯೆ, ದಕ್ಷಿಣ ಲೆಬನಾನ್‍ನ 22 ಗ್ರಾಮಗಳ ನಿವಾಸಿಗಳಿಗೆ ಅವಾಲಿ ನದಿಯ ಉತ್ತರಕ್ಕೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನೆ ಆದೇಶಿಸಿದೆ. `ನಿಮ್ಮ ಸ್ವಂತ ರಕ್ಷಣೆಗಾಗಿ ಮುಂದಿನ ಸೂಚನೆ ಬರುವವರೆಗೂ ನಿಮ್ಮ ಮನೆಗೆ ಹಿಂತಿರುಗಬೇಡಿ. ದಕ್ಷಿಣಕ್ಕೆ ಹೋಗಬೇಡಿ. ದಕ್ಷಿಣಕ್ಕೆ ಹೋಗುವವರು ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಾರೆ' ಎಂದು ಇಸ್ರೇಲ್ ಸೇನೆಯ ವಕ್ತಾರ ಅವಿಚಯ್ ಅಡ್ರೇ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

►ಇರಾನ್‍ನ ತೈಲ ಕ್ಷೇತ್ರದ ಮೇಲೆ ಅಮೆರಿಕದ ಹೊಸ ನಿರ್ಬಂಧ

ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‍ನ ತೈಲ ಮತ್ತು ಪೆಟ್ರೋಕೆಮಿಕಲ್ ಕ್ಷೇತ್ರದ ಮೇಲೆ ಹೊಸ ನಿರ್ಬಂಧವನ್ನು ಅಮೆರಿಕ ಘೋಷಿಸಿದೆ. ನಿರ್ಬಂಧಗಳು ಯುಎಇ, ಲೈಬೀರಿಯಾ, ಹಾಂಗ್‍ಕಾಂಗ್ ಮತ್ತು ಏಶ್ಯಾದಲ್ಲಿ ಖರೀದಿಗಾರರಿಗೆ ಇರಾನ್‍ನ ತೈಲವನ್ನು ಮಾರಾಟ ಮಾಡುವ ಹಡಗುಗಳು ಹಾಗೂ ಸಂಬಂಧಿತ ಸಂಸ್ಥೆಗಳಿಗೆ ತಡೆಯೊಡ್ಡುತ್ತವೆ. ಅಲ್ಲದೆ ಇರಾನ್‍ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಮತ್ತು ಸಾಗಣೆಗೆ ವ್ಯವಸ್ಥೆ ಮಾಡುವ, ಸುರಿನಾಮ್, ಭಾರತ, ಮಲೇಶ್ಯಾ ಮತ್ತು ಹಾಂಕಾಂಗ್ ಮೂಲದ ಕಂಪೆನಿಗಳ ಜಾಲವನ್ನು ನಿರ್ಬಂಧದ ವ್ಯಾಪ್ತಿಯೊಳಗೆ ಅಮೆರಿಕ ಸೇರಿಸಿದೆ. ಇರಾನ್‍ನ ಪ್ರಮುಖ ಆದಾಯದ ಮೂಲವಾಗಿರುವ ತೈಲ ಕ್ಷೇತ್ರದ ಮೇಲೆ ಒತ್ತಡ ಹೆಚ್ಚಿಸುವುದು ಅಮೆರಿಕದ ಉದ್ದೇಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News