ಮಧ್ಯಪ್ರಾಚ್ಯ ಸಂಘರ್ಷ ನಿಭಾಯಿಸಲು ಭದ್ರತಾ ಮಂಡಳಿ ನಿಷ್ಕ್ರಿಯ : ಇರಾನ್ ಅಧ್ಯಕ್ಷರ ಟೀಕೆ
ಕಝಾನ್ : ಮಧ್ಯ ಪ್ರಾಚ್ಯ ಸಂಘರ್ಷವನ್ನು ನಿಭಾಯಿಸಲು 15 ರಾಷ್ಟ್ರಗಳ ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಫಲವಾಗಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಖಂಡಿಸಿದ್ದಾರೆ.
ಫೆಲೆಸ್ತೀನ್‍ನ ಗಾಝಾ ಪಟ್ಟಿ ಹಾಗೂ ಲೆಬನಾನ್‍ನ ನಗರಗಳಲ್ಲಿ ಯುದ್ಧದ ಬೆಂಕಿ ಈಗಲೂ ಪ್ರಜ್ವಲಿಸುತ್ತಿದೆ. ಆದರೆ, ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಚಾಲಕಶಕ್ತಿಗಳಾದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸೇರಿದಂತೆ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಈ ಬಿಕ್ಕಟ್ಟಿನ ಬೆಂಕಿಯನ್ನು ನಂದಿಸಲು ಅಗತ್ಯವಾದ ದಕ್ಷತೆಯ ಕೊರತೆಯಿದೆ ಎಂದು ರಶ್ಯದ ಕಝಾನ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪೆಜೆಶ್ಕಿಯಾನ್ ಹೇಳಿದ್ದಾರೆ.
ವಿವಿಧ ದೇಶಗಳ `ಕೆಂಪು ಗೆರೆ'(ಗಡಿ ರೇಖೆ)ಯನ್ನು ಇಸ್ರೇಲ್ ಉಲ್ಲಂಘಿಸುತ್ತಿದ್ದು ಹಿಂಸಾಚಾರ ಮತ್ತು ಭಯದ ಹೊಸ ಅಲೆಯನ್ನು ಹೆಚ್ಚಿಸುತ್ತಿದೆ ಎಂದು ಪೆಜೆಶ್ಕಿಯಾನ್ ಖಂಡಿಸಿದ್ದಾರೆ.
ಗಾಝಾದಲ್ಲಿ ಯುದ್ಧ ಪ್ರಾರಂಭವಾದಂದಿನಿಂದ, ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷ್ಕ್ರಿಯವಾಗಿದೆ ಮತ್ತು ನಿಷ್ಪರಿಣಾಮಕಾರಿಯಾಗಿದೆ ಎಂದು ಇರಾನ್ ಟೀಕಿಸುತ್ತಿದೆ. ಗಾಝಾ ಮತ್ತು ಲೆಬನಾನ್‍ನಲ್ಲಿ ಕದನ ವಿರಾಮ ಸ್ಥಾಪನೆಗೆ ಇರಾನ್ ತೀವ್ರ ರಾಜತಾಂತ್ರಿಕ ಪ್ರಯತ್ನವನ್ನು ಮುಂದುವರಿಸಿದೆ. ಅಕ್ಟೋಬರ್ 1ರಂದು ಇರಾನ್ ನಡೆಸಿದ ದಾಳಿಗೆ ಪ್ರತೀಕಾರ ತೀರಿಸುವ ಇಸ್ರೇಲ್‍ನ ಬೆದರಿಕೆಯ ಬಳಿಕ ಸಂಘರ್ಷವು ಪ್ರದೇಶದಾದ್ಯಂತ ವಿಸ್ತರಿಸುವುದನ್ನು ತಡೆಯುವ ಪ್ರಯತ್ನವನ್ನೂ ನಡೆಸಿದೆ.
`ವಿಶ್ವಸಂಸ್ಥೆಯು ಹತಾಶೆಗೊಳಿಸುವ ನಿಷ್ಕ್ರಿಯ ವೇದಿಕೆಯಾಗಿ ಪರಿವರ್ತನೆಯಾಗಿದೆ. ವಿಶ್ವಸಂಸ್ಥೆ ತನ್ನ ಉದ್ದೇಶದಲ್ಲಿ ವಿಷಾದನೀಯವಾಗಿ ಸೋಲುತ್ತಿದೆ. ಯಾಕೆಂದರೆ ಅಮೆರಿಕವು ಆಕ್ರಮಣಕಾರಿ ಆಡಳಿತ(ಇಸ್ರೇಲ್)ವನ್ನು ಬೇಷರತ್ತಾಗಿ ಬೆಂಬಲಿಸುವುದು ವಲಯದಾದ್ಯಂತ ತನ್ನ ಆಕ್ರಮಣಗಳು ಮತ್ತು ದೌರ್ಜನ್ಯವನ್ನು ವಿಸ್ತರಿಸಲು ಇಸ್ರೇಲ್‍ಗೆ ಧೈರ್ಯ ತುಂಬಿದೆ' ಎಂದು ಇರಾನ್‍ನ ವಿದೇಶಾಂಗ ಇಲಾಖೆಯ ವಕ್ತಾರರು ಟೀಕಿಸಿದ್ದಾರೆ.
ಅಮೆರಿಕದ ಅಡ್ಡಿಯಿಂದಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಷ್ಕ್ರಿಯತೆ ಒಂದು ದುರಂತವಾಗಿದೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರ್ಘಾಚಿ ಆರೋಪಿಸಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳನ್ನು ತಡೆಹಿಡಿಯುವ ವೀಟೊ ಅಧಿಕಾರ ಹೊಂದಿರುವ ಐದು ಕಾಯಂ ಸದಸ್ಯರಲ್ಲಿ ಅಮೆರಿಕವೂ ಒಂದಾಗಿದೆ.