ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ

Update: 2023-11-18 16:35 GMT

Photo:  PTI 

ಗಾಝಾ: ಗಾಝಾದಲ್ಲಿನ ಜಬಾಲ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಅವಳಿ ದಾಳಿಯಲ್ಲಿ ಕನಿಷ್ಟ 80 ಮಂದಿ ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಶನಿವಾರ ಹೇಳಿದೆ.

ಮೊದಲ ದಾಳಿಯು ಶನಿವಾರ ಮುಂಜಾನೆ ಜಬಾಲ ಶಿಬಿರದಲ್ಲಿ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದು ಅಲ್-ಫಖೌರಾ ಶಾಲೆಯನ್ನು ಗುರಿಯಾಗಿಸಿ ನಡೆಸಿದ್ದು ಕನಿಷ್ಟ 50 ಮಂದಿ ಮೃತಪಟ್ಟಿದ್ದಾರೆ. ಎರಡನೇ ದಾಳಿಯಲ್ಲಿ 19 ಮಕ್ಕಳ ಸಹಿತ 32 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗಾಝಾ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:

►  ಗಾಝಾಕ್ಕೆ ನಿಯಮಿತ ನೆರವು ಪೂರೈಕೆಗೆ ಇಸ್ರೇಲ್‍ನ ಯುದ್ಧ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ ಎರಡು ಇಂಧನ ಟ್ಯಾಂಕರ್ ಗಳು ಶುಕ್ರವಾರ ರಫಾ ಗಡಿದಾಟು ಮೂಲಕ ಗಾಝಾ ತಲುಪಿದೆ. ಟ್ಯಾಂಕರ್ ಗಳಲ್ಲಿ 60,000 ಲೀಟರ್ ಇಂಧನವಿತ್ತು ಎಂದು ಸಿಎನ್‍ಎನ್ ವರದಿ ಮಾಡಿದೆ.

►  ಒಪ್ಪಂದದ ಪ್ರಕಾರ ಪ್ರತೀ 48 ಗಂಟೆಗಳಿಗೆ 1,40,000 ಲೀಟರ್ಗಳಷ್ಟು ಇಂಧನವನ್ನು ಗಾಝಾಕ್ಕೆ ಪೂರೈಸಲಾಗುತ್ತದೆ ಮತ್ತು ಇದರಲ್ಲಿ 20,000 ಲೀಟರ್ ಇಂಧನ ಜನರೇಟರ್ಗಳಿಗೆ ಮೀಸಲು ಎಂದು ವಿಶ್ವಸಂಸ್ಥೆ ಹೇಳಿದೆ.

►  ಹಮಾಸ್ ವಿರುದ್ಧದ ದಾಳಿಯನ್ನು ದಕ್ಷಿಣ ಗಾಝಾಕ್ಕೆ ವಿಸ್ತರಿಸಬಹುದು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

►  ಅಲ್-ಶಿಫಾ ಆಸ್ಪತ್ರೆಯ ನೆಲದಡಿಯಲ್ಲಿ ಹಮಾಸ್‍ನ ಕಮಾಂಡ್ ಕೇಂದ್ರವಿದೆ ಎಂದು ಇಸ್ರೇಲ್ ಹೇಳಿದ್ದು ಇದಕ್ಕಾಗಿ ಆಸ್ಪತ್ರೆಯ ಎಲ್ಲೆಡೆ ಶೋಧ ನಡೆಸುವುದಾಗಿ ಘೋಷಿಸಿದೆ.

►  ಗಾಝಾ ಪ್ರದೇಶದಲ್ಲಿ ಆಹಾರದ ತೀವ್ರ ಕೊರತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

►  ಇಸ್ರೇಲ್ ಪಡೆ ಶುಕ್ರವಾರ ಪಶ್ಚಿಮ ದಂಡೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮಂದಿ ಫೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.

►  ದಕ್ಷಿಣ ಗಾಝಾದ 70%ದಷ್ಟು ನಿವಾಸಿಗಳಿಗೆ ಶುದ್ಧ ನೀರಿನ ಕೊರತೆ ಎದುರಾಗಿದೆ. ನೈರ್ಮಲ್ಯದ ಸಮಸ್ಯೆಯೂ ಎದುರಾಗಿದ್ದು ಕೊಳಚೆ ನೀರು ರಸ್ತೆಯಲ್ಲಿ ಹರಿಯಲಾರಂಭಿಸಿದೆ ಎಂದು ಫೆಲಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿ ಕಳವಳ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News