ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಕನಿಷ್ಠ 45 ಮಂದಿ ಮೃತ್ಯು
ಜೆರುಸಲೇಂ: ಉತ್ತರ ಗಾಝಾ ಪ್ರದೇಶದ ಜನನಿಬಿಡ ಜಬಾಲಿಯಾ ನಿರಾಶ್ರಿತರ ಶಿಬಿರದ ವಸತಿ ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಕನಿಷ್ಠ 45 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ರಕ್ಷಣಾ ಸಚಿವಾಲಯ ಗುರುವಾರ ಪ್ರಕಟಿಸಿದೆ.
ನಿರಾಶ್ರಿತರ ಶಿಬಿರದ ಅಲ್-ಶಿಹಾಬ್ ಕುಟುಂಬದ ಮನೆಯ ಮೇಲೆ ಸಂಜೆಯ ವೇಳೆಗೆ ಈ ದಾಳಿ ನಡೆದಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಇಯಾದ್ ಬೋಝುಮ್ ಹೇಳಿದ್ದಾರೆ. ಅಲ್-ಶಿಹಾಬ್ ಮನೆಯಲ್ಲಿ ಹಲವು ಮಂದಿ ಸಂಬಂಧಿಕರು ಈ ದಾಳಿ ಯ ವೇಳೆ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ತೀವ್ರ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಬೇರೆಡೆಯಿಂದ ಓಡಿಬಂದು ಈ ಕಟ್ಟಡದಲ್ಲಿ ಆಶ್ರಯ ಪಡೆದಿದ್ದರು ಎಂದು ತಿಳಿದು ಬಂದಿದೆ.
ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯವನ್ನು ಪರಿಹಾರ ಕಾರ್ಯಕರ್ತರು ಮುಂದುವರಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಸೇನೆ ಭೂದಾಳಿ ನಡೆಸಲು ಸಜ್ಜಾಗುತ್ತಿದ್ದು, ಈಗಾಗಲೇ ಗಾಝಾಪಟ್ಟಿಯುದ್ದಕ್ಕೂ ವಾಯುದಾಳಿಗಳನ್ನು ನಡೆಸುತ್ತಿದೆ. ಇಸ್ರೇಲ್ ಇಡೀ ಪ್ರದೇಶದ ಮೇಲೆ ಆಕ್ರಮಣ ನಡೆಸಿರುವ ಹಿನ್ನೆಲೆಯಲ್ಲಿ ಆಹಾರ, ಇಂಧನ ಮತ್ತು ವೈದ್ಯಕೀಯ ಸಾಧನಗಳ ಕೊರತೆ ಫೆಲಸ್ತೀನನ್ನು ಕಾಡುತ್ತಿದೆ. ವಾರಾಂತ್ಯದ ದಾಳಿಯಲ್ಲಿ ಹಮಾಸ್ 150 ಮಂದಿಯನ್ನು ಒತ್ತೆಯಾಳುಗಳಾಗಿ ಕರೆದೊಯ್ದಿದ್ದು, ಅವರನ್ನು ಬಿಡುಗಡೆ ಮಾಡುವವರೆಗೂ ದಾಳಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.