ಗಾಝಾ ಮೇಲೆ ಇಸ್ರೇಲ್ ಬಾಂಬ್ ದಾಳಿ ಆರಂಭ
ಹೊಸದಿಲ್ಲಿ: ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಪ್ರತಿದಾಳಿ ನಡೆಸುವ ಎಚ್ಚರಿಕೆಯನ್ನು ಇಸ್ರೇಲ್ ನೀಡಿದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಪೆಲಸ್ತೀನ್ ಪ್ರಜೆಗಳು ದಕ್ಷಿಣ ಗಾಝಾಗೆ ಪಲಾಯನ ಮಾಡಿ ಆಶ್ರಯ ಬಯಸಿದ್ದಾರೆ.
ಈಗಾಗಲೇ ಇಸ್ರೇಲ್ ಸೇನೆ ಸ್ಥಳೀಯ ಮಟ್ಟದಲ್ಲಿ ದಾಳಿಯನ್ನು ಆರಂಭಿಸಿದ್ದು, 24 ಗಂಟೆಗಳಿಂದ ದಾಳಿ ನಡೆಯುತ್ತಿದೆ ಎಂದು ಇಸ್ರೇಲ್ ಪ್ರಕಟಿಸಿದೆ.
"ನಾಪತ್ತೆಯಾಗಿರುವವರನ್ನು ಪತ್ತೆ ಮಾಡುವುದು ಈ ದಾಳಿಯ ಉದ್ದೇಶ” ಎಂದು ಸೇನೆ ಸ್ಪಷ್ಟಪಡಿಸಿದೆ. ಹಮಾಸ್ ತನ್ನ ದಾಳಿಯ ವೇಳೆ 150 ಮಂದಿ ಇಸ್ರೇಲಿಗಳು, ವಿದೇಶಿಯರು ಮತ್ತು ಅವಳಿ ಪೌರತ್ವ ಹೊಂದಿದವನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ.
ಕಳೆದ 24 ಗಂಟೆಗಳಿಂದ ಗಾಝಾ ಪ್ರದೇಶದೊಳಗೆ ಈ ದಾಳಿ ಮುಂದುವರಿದಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಈ ದಾಳಿಯ ಹಿನ್ನೆಲೆಯಲ್ಲಿ ಜನದಟ್ಟಣೆ ಅಧಿಕ ಇರುವ ಗಾಝಾ ಎನ್ ಕ್ಲೇವ್ ನಲ್ಲಿ 600 ಮಕ್ಕಳು ಸೇರಿದಂತೆ 1900 ಮಂದಿ ಗಾಝಾ ಜನರು ಇಸ್ರೇಲಿ ವಾಯುದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಡಿಭಾಗದಲ್ಲಿ ಹಿಂಸಾಚಾರ ಮತ್ತಷ್ಟು ಉಲ್ಬಣಗೊಂಡಿರುವ ನಡುವೆಯೇ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನತೆ ತಲೆದೋರಿದೆ. ಫೆಲಸ್ತೀನಿಯನ್ನರ ಪರವಾಗಿ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಕ್ರಮವನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
ಬೀರುಟ್, ಇರಾಕ್, ಇರಾನ್, ಜೋರ್ಡನ್ ಮತ್ತು ಬಹರೈನ್ ನಲ್ಲಿ ಫೆಲಸ್ತೀನಿಯನ್ನರ ಪರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.