ಗಾಝಾ ಗಡಿಪ್ರದೇಶ ವಶಪಡಿಸಿಕೊಂಡ ಇಸ್ರೇಲ್; 3 ಸಾವಿರ ದಾಟಿದ ಮೃತರ ಸಂಖ್ಯೆ

Update: 2023-10-11 07:01 GMT

ಗಾಝಾ: ಹಮಾಸ್ ನಿಂದ ಗಾಝಾ ಗಡಿ ಪ್ರದೇಶವನ್ನು ಮಂಗಳವಾರ ತಾನು ಮತ್ತೆ ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಎರಡೂ ಕಡೆಯ ಮೃತರ ಸಂಖ್ಯೆ 3 ಸಾವಿರ ದಾಟಿದೆ.

"ಇದು ಯುದ್ಧವಲ್ಲ; ಅಥವಾ ಯುದ್ಧಭೂಮಿಯಲ್ಲ. ಇದು ಹತ್ಯಾಕಾಂಡ" ಎಂದು ಇಸ್ರೇಲ್ ನ ಕಮಾಂಡರ್ ಮೇಜರ್ ಜನರಲ್ ಇಟಾಯಿ ವೆರುವ್ ಹೇಳಿದ್ದಾರೆ. "ಇಂಥದ್ದನ್ನು ನಾನು ನನ್ನ ಜೀವನದಲ್ಲೇ ಕಂಡಿಲ್ಲ. ಇದು ನಮ್ಮ ಅಜ್ಜಂದಿರ ಕಾಲದ ಹತ್ಯಾಕಾಂಡದಂತಿದೆ" ಎಂದು ಬಣ್ಣಿಸಿದ್ದಾರೆ.

ಈ ಮಧ್ಯೆ ಹಲವು ದೇಶಗಳು ಯುದ್ಧ ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಲು ಮುಂದಾಗಿವೆ. ಇಸ್ರೇಲ್ ನ 75 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಈ ಯುದ್ಧದಲ್ಲಿ ಇಸ್ರೇಲ್ ನ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 800 ಮಂದಿ ತಮ್ಮ ಕಡೆ ಸಾವಿಗೀಡಾಗಿದ್ದಾಗಿ ಗಾಝಾ ಅಧಿಕಾರಿಗಳು ಹೇಳಿದ್ದಾರೆ. 1500 ಮಂದಿ  ಹಮಾಸ್ ಹೋರಾಟಗಾರರ ಮೃತದೇಹಗಳು ಪತ್ತೆಯಾಗಿವೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಸಿರಿಯಾದಿಂದ ಆಗುತ್ತಿರುವ ದಾಳಿಗೆ ಕೂಡಾ ನಾವು ಆರ್ಟಿಲರಿ ಮತ್ತು ಮೋರ್ಟರ್ ಶೆಲ್ಲಿಂಗ್ ಮೂಲಕ ಪ್ರತಿಕ್ರಿಯಿಸಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಹಮಾಸ್ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ದಾಳಿ ನಡೆಸಿರುವುದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಗುಂಡಿನ ಚಕಮಕಿ ಮುಂದುವರಿದಿದೆ.

ಗಾಝಾ ಗಡಿಯ ಸಮೀಪದ ಇಸ್ರೇಲಿ ಗ್ರಾಮ ಸಂಪೂರ್ಣ ನಾಶವಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಹಮಾಸ್ ಹೋರಾಟಗಾರರ ದೇಹಗಳು ರಾಶಿರಾಶಿಯಾಗಿ ಬಿದ್ದಿರುವುದು ಕರಾಳತೆಗೆ ಸಾಕ್ಷಿಯಾಗಿದೆ. ಸುಟ್ಟು ಹೋದ ಕಾರುಗಳ ಅವಶೇಷಗಳ ನಡುವೆ ಹಮಾಸ್ ಹೋರಾಟಗಾರರ ದೇಹಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಗ್ರಾಮಕ್ಕೆ ಕಾಲಿಡುತ್ತಿದ್ದಂತೆಯೇ ಕಂಡು ಬರುತ್ತಿದೆ. ಮನೆಗಳ ಬಾಗಿಲು ಹಾಗೂ ಗೋಡೆಗಳು ಧ್ವಂಸವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News