ಗಾಝಾದ ಆಯಕಟ್ಟಿನ ಕಾರಿಡಾರ್ ಇಸ್ರೇಲ್‍ನ ವಶಕ್ಕೆ

PC : aljazeera.com
ಜೆರುಸಲೇಂ: ಗಾಝಾ ಪಟ್ಟಿಯ ರಫಾ ಮತ್ತು ಖಾನ್ ಯೂನಿಸ್ ನಗರಗಳನ್ನು ಸಂಪರ್ಕಿಸುವ ಅತ್ಯಂತ ಆಯಕಟ್ಟಿನ ಮೊರಾಗ್ ಆಕ್ಸಿಸ್ ಕಾರಿಡಾರ್ ನ ನಿಯಂತ್ರಣವನ್ನು ಇಸ್ರೇಲ್ ಪಡೆದಿದೆ. ಗಾಝಾದ ಬಹುತೇಕ ಪ್ರದೇಶಗಳಲ್ಲಿ ಮಿಲಿಟರಿ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದು ಯುದ್ಧವಲಯದಿಂದ ಸ್ಥಳಾಂತರಗೊಳ್ಳುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕ್ರಮವು ಈಜಿಪ್ಟ್ ನ ಗಡಿಯ ಉದ್ದಕ್ಕೂ ಫಿಲಡೆಲ್ಫಿ ಮಾರ್ಗವನ್ನು ಮೊರಾಗ್ ಗೆ ಪರಿಣಾಮಕಾರಿಯಾಗಿ ಸಂಪರ್ಕಿಸುತ್ತದೆ. ಇದು ವ್ಯಾಪಕವಾದ ಇಸ್ರೇಲಿ ನಿಯಂತ್ರಿತ ಭದ್ರತಾ ವಲಯವನ್ನು ಸೃಷ್ಟಿಸುತ್ತದೆ ಎಂದು ಇಸ್ರೇಲಿ ರಕ್ಷಣಾ ಸಚಿವರು ಹೇಳಿದ್ದಾರೆ.
ಮೊರಾಗ್ ಆಕ್ಸಿಸ್ ಎಂದು ಕರೆಯಲಾಗುವ ಹೊಸ ಭದ್ರತಾ ಕಾರಿಡಾರ್ ದಕ್ಷಿಣದ ನಗರಗಳಾದ ರಫಾ ಮತ್ತು ಖಾನ್ ಯೂನಿಸ್‍ಗಳನ್ನು ಸಂಪರ್ಕಿಸುತ್ತದೆ.
ವಿಸ್ತರಿತ ಕಾರ್ಯಾಚರಣೆಯ ಭಾಗವಾಗಿ, ಖಾನ್ ಯೂನಿಸ್ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಾವಿರಾರು ಫೆಲೆಸ್ತೀನೀಯರಿಗೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಆದೇಶ ಜಾರಿಗೊಳಿಸಿದೆ. ಈ ಪ್ರದೇಶದಿಂದ ಇಸ್ರೇಲ್ ಪಡೆಯತ್ತ ರಾಕೆಟ್ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರತೀಕಾರ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ.
ವಿಸ್ತರಿಸುತ್ತಿರುವ ಸ್ಥಳಾಂತರಿಸುವ ಆದೇಶಗಳ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು ಈ ಕ್ರಮವು ಫೆಲೆಸ್ತೀನೀಯರನ್ನು ಸಣ್ಣ ಮತ್ತು ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಬಲವಂತವಾಗಿ ವರ್ಗಾವಣೆ ಮಾಡಲು ಕಾರಣವಾಗುತ್ತದೆ ಎಂದಿದೆ.
ಇಸ್ರೇಲ್ ನ ಕಾರ್ಯಾಚರಣೆಯಿಂದ ಅಸಹಾಯಕ ನಾಗರಿಕರ ಹತ್ಯೆಯಾಗುತ್ತಿದೆ. ಈಗಲೂ ಸೆರೆಯಲ್ಲಿರುವ ಇಸ್ರೇಲಿ ಒತ್ತೆಯಾಳುಗಳ ಸುರಕ್ಷತೆಯನ್ನು ಗಂಡಾಂತರಕ್ಕೆ ಸಿಲುಕಿಸುತ್ತದೆ ಎಂದು ಹಮಾಸ್ ಖಂಡಿಸಿದೆ.
ಫಿಲಾಡೆಲ್ಫಿ ಮತ್ತು ನೆಟ್‍ಜಾರಿಮ್ ಕಾರಿಡಾರ್ ಗಳ ನಿಯಂತ್ರಣವನ್ನು ಈಗಾಗಲೇ ಇಸ್ರೇಲ್ ಪಡೆದಿದ್ದು, ಇದೀಗ ಮೊರಾಗ್ ಕಾರಿಡಾರ್ ನ ನಿಯಂತ್ರಣದೊಂದಿಗೆ ಗಾಝಾ ಪ್ರದೇಶದ 50%ಕ್ಕೂ ಅಧಿಕ ಭೂಪ್ರದೇಶ ಇಸ್ರೇಲ್‍ನ ನಿಯಂತ್ರಣಕ್ಕೆ ಬಂದಂತಾಗಿದೆ. ಇಸ್ರೇಲ್ ನ ಕ್ರಮಗಳು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಫೆಲೆಸ್ತೀನೀಯರು ಸ್ವಯಂಪ್ರೇರಿತವಾಗಿ ಸ್ಥಳಾಂತರಗೊಳ್ಳಬೇಕೆಂಬ ಇಸ್ರೇಲ್‍ನ ಪ್ರಸ್ತಾಪವು ಜನಾಂಗೀಯ ಶುದ್ಧೀಕರಣಕ್ಕೆ ಕಾರಣವಾಗಬಹುದು ಎಂದು ಫೆಲೆಸ್ತೀನ್ ಮೂಲಗಳು ಆತಂಕ ವ್ಯಕ್ತಪಡಿಸಿವೆ.