ಒತ್ತೆಯಾಳುಗಳ ಮೃತದೇಹ ಹಸ್ತಾಂತರಕ್ಕೆ ಇಸ್ರೇಲ್, ಹಮಾಸ್ ಒಪ್ಪಂದ

Photo credit: PTI
ಗಾಝಾ: ಒತ್ತೆಯಾಳುಗಳ ಮೃತದೇಹಗಳ ಹಸ್ತಾಂತರಕ್ಕೆ ಪ್ರತಿಯಾಗಿ ನೂರು ಕೈದಿಗಳನ್ನು ಬಿಡುಗಡೆಗೊಳಿಸುವ ಒಪ್ಪಂದಕ್ಕೆ ಇಸ್ರೇಲ್ ಹಾಗೂ ಹಮಾಸ್ ಸಮ್ಮತಿಸಿವೆ ಎಂದು ವರದಿಯಾಗಿದೆ.
ನಾಲ್ವರು ಇಸ್ರೇಲಿ ಒತ್ತೆಯಾಳುಗಳ ಮೃತದೇಹವನ್ನು ಗುರುವಾರ ಈಜಿಪ್ಟ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಇದಕ್ಕೆ ಪ್ರತಿಯಾಗಿ ನೂರಕ್ಕೂ ಹೆಚ್ಚು ಫೆಲೆಸ್ತೀನಿಯನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ಹಮಾಸ್ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮುನ್ನ ಅವರನ್ನು ಗಾಝಾದಲ್ಲಿ ಸಾರ್ವಜನಿಕರ ಎದುರು ಮೆರವಣಿಗೆ ನಡೆಸಿ, ಜನರ ಗುಂಪಿನತ್ತ ಕೈಬೀಸುವಂತೆ ಬಲವಂತಗೊಳಿಸಿ ಅವಮಾನ ಮಾಡಿದೆ ಎಂದು ದೂಷಿಸಿದ್ದ ಇಸ್ರೇಲ್, ಒಪ್ಪಂದದ ಪ್ರಕಾರ 600 ಫೆಲೆಸ್ತೀನ್ ಕೈದಿಗಳ ಬಿಡುಗಡೆಯನ್ನು ವಿಳಂಬಗೊಳಿಸಿತ್ತು. ಇಸ್ರೇಲ್ ನ ಈ ನಡೆಯು ಕದನ ವಿರಾಮ ಒಪ್ಪಂದ ಮುರಿದುಬೀಳುವ ಸಾಧ್ಯತೆಯನ್ನು ತೆರೆದಿಟ್ಟಿತ್ತು.
ಈ ಮಧ್ಯೆ, ಮಂಗಳವಾರ ಸಂಜೆ ಈಜಿಪ್ಟ್ ಗೆ ಭೇಟಿ ನೀಡಿದ ಖಲೀಲ್ ಅಲ್-ಹಯಾ ನೇತೃತ್ವದ ಹಮಾಸ್ ನಿಯೋಗ ಈಜಿಪ್ಟ್ ಅಧಿಕಾರಿಗಳ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು ವಿವಾದ ಬಗೆಹರಿಸುವ ಬಗ್ಗೆ ಸಹಮತ ಮೂಡಿದೆ. ಗುರುವಾರ ನಾಲ್ವರು ಒತ್ತೆಯಾಳುಗಳ ಮೃತದೇಹ ಹಸ್ತಾಂತರಗೊಂಡ ಬಳಿಕ 100ಕ್ಕೂ ಅಧಿಕ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸುತ್ತದೆ.
ಫೆ.22ರಂದು ಬಿಡುಗಡೆಗೊಳ್ಳಬೇಕಿದ್ದ ಕೈದಿಗಳೂ ಇದೇ ಸಂದರ್ಭ ಬಿಡುಗಡೆಗೊಳ್ಳಲಿದ್ದಾರೆ ಎಂದು ಹಮಾಸ್ ಹೇಳಿಕೆ ತಿಳಿಸಿದೆ. ಯಾವುದೇ ಸಾರ್ವಜನಿಕ ಸಮಾರಂಭವಿಲ್ಲದೆ ಮೃತದೇಹಗಳ ಹಸ್ತಾಂತರ ನಡೆಯಲಿದೆ ಎಂದು ಇಸ್ರೇಲ್ ಅಧಿಕಾರಿ ಹೇಳಿದ್ದಾರೆ.