ಉತ್ತರ ಗಾಝಾದ 11 ಲಕ್ಷ ಜನರಿಗೆ 24 ಗಂಟೆಗಳೊಳಗೆ ಸ್ಥಳ ಬಿಟ್ಟು ತೆರಳುವಂತೆ ಆದೇಶಿಸಿದ ಇಸ್ರೇಲ್ ಮಿಲಿಟರಿ
ಗಾಝಾ ಸಿಟಿ : ಹಮಾಸ್ ವಿರುದ್ಧ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ನಡೆಸುವ ಪ್ರತಿಜ್ಞೆ ಮಾಡಿರುವ ಇಸ್ರೇಲ್, ನಿರೀಕ್ಷಿತ ‘ಭೂ ಕಾರ್ಯಾಚರಣೆ’ಗೂ ಮುನ್ನ 24 ಗಂಟೆಯೊಳಗೆ ಗಾಝಾ ನಗರದ ಖಾಲಿ ಮಾಡುವಂತೆ ಫೆಲೆಸ್ತೀನಿಯರಿಗೆ ಶುಕ್ರವಾರ ಗಡುವು ನೀಡಿದೆ.
ಸ್ಥಳಾಂತರಗೊಳ್ಳುವಂತೆ ಸೂಚಿಸಿದ ಆದೇಶದ ಬಗ್ಗೆ ಗುರುವಾರ ಮಧ್ಯರಾತ್ರಿ ತನಗೆ ಮಾಹಿತಿ ನೀಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಗಾಝಾ ನಗರದ ಬಳಿಯ ‘ವಾಡಿ ಗಾಝಾದ’ ದಕ್ಷಿಣದ ಪ್ರದೇಶಕ್ಕೆ ತೆರಳುವಂತೆ ಗಾಝಾ ನಗರದ ನಿವಾಸಿಗಳಿಗೆ ಕರೆ ನೀಡಿರುವುದಾಗಿ ಇಸ್ರೇಲ್ ಹೇಳಿದೆ. ಹಮಾಸ್-ಇಸ್ರೇಲ್ ಸಂಘರ್ಷಕ್ಕೆ ಸಂಬಂಧಿಸಿದ ಶುಕ್ರವಾರದ ಕೆಲವು ಬೆಳವಣಿಗೆಗಳು:
► ಇಸ್ರೇಲ್ ನ ಆದೇಶವನ್ನು ನಮ್ಮ ಫೆಲೆಸ್ತೀನ್ ಜನರು ತಿರಸ್ಕರಿಸಿದ್ದಾರೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ.
► ಹಮಾಸ್ ಉಗ್ರರು ಗಾಝಾ ನಗರದಲ್ಲಿ ಮನೆಗಳ ಕೆಳಗಿನ ಸುರಂಗಗಳಲ್ಲಿ, ಅಮಾಯಕ ನಾಗರಿಕರಿಂದ ತುಂಬಿರುವ ಕಟ್ಟಡಗಳ ಒಳಗೆ ಅವಿತಿದ್ದಾರೆ ಎಂದು ಇಸ್ರೇಲ್ ಹೇಳಿದೆ.
► ಗಾಝಾ ಪ್ರದೇಶದ ದಕ್ಷಿಣಕ್ಕೆ ಸಾಮೂಹಿಕ ಸ್ಥಳಾಂತರವು ಅಸಾಧ್ಯ ಮತ್ತು ಗಾಝಾ ಪಟ್ಟಿಯ 50%ದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
► ಗಾಝಾದ ಮೇಲಿನ ಇಸ್ರೇಲ್ ದಾಳಿಯಲ್ಲಿ ವಿದೇಶಿಯರ ಸಹಿತ 13 ಒತ್ತೆಯಾಳುಗಳು ಹತರಾಗಿದ್ದಾರೆ ಎಂದು ಹಮಾಸ್ ಶುಕ್ರವಾರ ಹೇಳಿದೆ.
► ಗಾಝಾದ ಮೇಲಿನ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 500ಕ್ಕೂ ಅಧಿಕ ಮಕ್ಕಳ ಸಹಿತ 1,530 ಮಂದಿ ಮೃತಪಟ್ಟಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
► ಶುಕ್ರವಾರ ಬೆಳಿಗ್ಗೆ ಉತ್ತರ ಗಾಝಾಪಟ್ಟಿಯ ಅಲ್-ಶಾತಿ ವಲಸಿಗರ ಶಿಬಿರ ಮತ್ತು ಗಾಝಾ ನಗರದಲ್ಲಿ ಜನವಸತಿ ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್ ಭಾರೀ ದಾಳಿ ನಡೆಸಿದೆ ಎಂದು ಎಎಫ್ಪಿ ವರದಿ ಮಾಡಿದೆ.
► ಯುಎನ್ಆರ್ಡಬ್ಲ್ಯೂಎ(ಫೆಲೆಸ್ತೀನಿಯನ್ ನಿರಾಶ್ರಿತರಿಗೆ ನೆರವಾಗುವ ವಿಶ್ವಸಂಸ್ಥೆ ಏಜೆನ್ಸಿ)ಯ ಕಾರ್ಯಾಚರಣಾ ಕೇಂದ್ರ ಗಾಝಾದ ದಕ್ಷಿಣಕ್ಕೆ ಸ್ಥಳಾಂತರ.
► ಚೀನಾದ ಬೀಜಿಂಗ್ ನಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯ ಸಿಬಂದಿಗೆ ಚೂರಿ ಇರಿತ.
► ಹಮಾಸ್ ನ ಹಿಡಿತದಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಇಸ್ರೇಲ್ ಜತೆಗಿನ ಸಮನ್ವಯವನ್ನು ಅಮೆರಿಕ ಮುಂದುವರಿಸಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
► ಹಮಾಸ್ ಐಸಿಸ್ ಗಿಂತ ಕೆಟ್ಟದಾಗಿದ್ದು ಐಸಿಸ್ ವಿರುದ್ಧದ ಹೋರಾಟದಲ್ಲಿ ಇಡೀ ನಾಗರಿಕ ಜಗತ್ತು ಒಗ್ಗೂಡಿದಂತೆಯೇ ಹಮಾಸ್ ವಿರುದ್ಧದ ಹೋರಾಟದಲ್ಲಿ ನಮಗೆ ಸಹಾಯ ಮಾಡಲು ಜಗತ್ತು ಒಂದಾಗಬೇಕಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
► ಗಾಝಾದ ಮೇಲಿನ ಇಸ್ರೇಲ್ ದಾಳಿ ತಕ್ಷಣ ನಿಲ್ಲದಿದ್ದರೆ ಈ ಹಿಂಸಾಚಾರವು ಮಧ್ಯಪ್ರಾಚ್ಯದ ಇತರ ಭಾಗಗಳಿಗೆ ಹರಡಬಹುದು ಎಂದು ಇರಾನ್ ವಿದೇಶಾಂಗ ಸಚಿವರು ಎಚ್ಚರಿಸಿದ್ದಾರೆ.