ಇಸ್ರೇಲ್ ಗೆ ಅಮೆರಿಕ, ಇಂಗ್ಲೆಂಡ್ ಸಹಿತ 5 ರಾಷ್ಟ್ರಗಳ ಬೆಂಬಲ
ವಾಷಿಂಗ್ಟನ್: ಹಮಾಸ್ ಗುಂಪಿನ ದಾಳಿ ಹಿನ್ನೆಲೆಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್ ಪ್ರಯತ್ನವನ್ನು ಬೆಂಬಲಿಸುವುದಾಗಿ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟೆಲಿ ಮತ್ತು ಬ್ರಿಟನ್ನ ಮುಖಂಡರು ಸೋಮವಾರ ಜಂಟಿ ಹೇಳಿಕೆ ನೀಡಿದ್ದಾರೆ.
" ಫೆಲೆಸ್ತೀನ್ ಜನತೆಯ ಕಾನೂನುಬದ್ಧ ಆಕಾಂಕ್ಷೆಗಳನ್ನು ನಾವು ಗೌರವಿಸುತ್ತೇವೆ. ಆದರೆ ಹಮಾಸ್, ಭೀತಿ ಹಾಗೂ ರಕ್ತಪಾತವನ್ನು ಹೊರತುಪಡಿಸಿ ಫೆಲೆಸ್ತೀನ್ ಜನತೆಗಾಗಿ ಏನನ್ನೂ ಕೊಟ್ಟಿಲ್ಲ" ಎಂದು ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಹಮಾಸ್ ನಡೆಸಿದ ದಾಳಿಯಲ್ಲಿ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2300 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಭದ್ರತಾ ಪಡೆ ಪ್ರಕಟಿಸಿದೆ. "ಎರಡು ದಿನಗಳ ಹಿಂದೆ ನಾವು ಕಂಡಿರುವುದು ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ಭೀಕರ ನಾಗರಿಕ ದಾಳಿ. ಇಂಥ ಭಯಾನಕ ಸ್ಥಿತಿ ನಮಗೆ ಎಂದೂ ಅನುಭವಕ್ಕೆ ಬಂದಿರಲಿಲ್ಲ. ಇದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ" ಎಂದು ಇಸ್ರೇಲ್ ಭದ್ರತಾ ಪಡೆಗಳ ವಕ್ತಾರ ಮೇಜರ್ ಲಿಬ್ಬಿ ವೀಸ್ ಸೋಮವಾರ ರಾತ್ರಿ ಹೇಳಿಕೆ ನೀಡಿದ್ದಾರೆ.
ಇಸ್ರೇಲ್ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಲಿ ಕೊಹೆನ್ ಮತ್ತು ವಕ್ತಾರ ಲಿಯೋರ್ ಹಯಾತ್ ಕೂಡಾ ಜತೆಗಿದ್ದರು. ಹಮಾಸ್ ದಾಳಿಗೆ ಇರಾನ್ ಬೆಂಬಲ ನೀಡಿರುವುದನ್ನು ಕಟುವಾಗಿ ಟೀಕಿಸಿದ ಅವರು, ಹಮಾಸ್ ಚಟುವಟಿಕೆಗಳಲ್ಲಿ ಆ ದೇಶದ ಪಾತ್ರ ಇದೆ ಎಂದು ಆಪಾದಿಸಿದರು.