ಇಸ್ರೇಲ್ ಕಾರ್ಯಾಚರಣೆ ಅಂತರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಲಿ: ಗುಟೆರಸ್

Update: 2023-10-10 18:16 GMT

File Photo

ನ್ಯೂಯಾರ್ಕ್: ಗಾಝಾ ಸಂಘರ್ಷ ಉಲ್ಬಣಗೊಂಡಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ರಕ್ತಪಾತ, ದ್ವೇಷ ಮತ್ತು ಧ್ರುವೀಕರಣದ ಈ ವಿಷವರ್ತುಲವನ್ನು ಕೊನೆಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಗಾಝಾಕ್ಕೆ ಎಲ್ಲಾ ಆಹಾರ ಮತ್ತು ಇತರ ಅಗತ್ಯ ಪೂರೈಕೆಗಳನ್ನು ನಿರ್ಬಂಧಿಸಿ ಸಂಪೂರ್ಣ ಮುತ್ತಿಗೆ ಹೇರುವ ಇಸ್ರೇಲ್ ನ ಪ್ರತಿಜ್ಞೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಅವರು, ಹಮಾಸ್ನ ದಾಳಿಗೆ ಮಿಲಿಟರಿ ಪ್ರತಿಕ್ರಿಯೆಯ ಸಂದರ್ಭ ಅಂತರಾಷ್ಟ್ರೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸುವಂತೆ ಇಸ್ರೇಲ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಗಾಝಾದಿಂದ ಇಸ್ರೇಲ್ ಮೇಲೆ ನಡೆಸಲಾದ ಹೇಯ ದಾಳಿ ಖಂಡನೀಯ. ಫೆಲೆಸ್ತೀನಿಯನ್ ಜನರ ಸಮಸ್ಯೆ, ದುಃಖವನ್ನು ನಾವು ಗುರುತಿಸುತ್ತೇವೆ. ಆದರೆ ಭಯೋತ್ಪಾದನೆಯ ಕೃತ್ಯ, ನಾಗರಿಕರ ಹತ್ಯೆ, ಅಪಹರಣ, ಚಿತ್ರಹಿಂಸೆಯ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ' ಎಂದು ಗುಟೆರಸ್ ಹೇಳಿದ್ದು, ದಾಳಿಯನ್ನು ತಕ್ಷಣ ನಿಲ್ಲಿಸಿ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. `ಹಿಂಸಾಚಾರವು ಶೂನ್ಯದಿಂದ ಸೃಷ್ಟಿಯಾಗಿಲ್ಲ. 56 ವರ್ಷಗಳಿಂದ ಮುಂದುವರಿದಿರುವ ಸ್ವಾಧೀನತೆ, ರಾಜಕೀಯ ಪರಿಹಾರ ಗೋಚರಿಸದ ದೀರ್ಘಾವಧಿಯ ಬಿಕ್ಕಟ್ಟಿನಿಂದ ಸ್ಫೋಟಗೊಂಡಿದೆ' ಎಂದು ಗುಟೆರಸ್ ಹೇಳಿದ್ದಾರೆ.

ಗಾಝಾದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕರೆಯಲಾದ ವಿಶ್ವಸಂಸ್ಥೆಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು `ಗಾಝಾದಲ್ಲಿನ ಮಾನವೀಯ ಪರಿಸ್ಥಿತಿ ಮೊದಲಿನಿಂದಲೂ ಅತ್ಯಂತ ಭೀಕರವಾಗಿತ್ತು. ಈಗ ಮತ್ತಷ್ಟು ಹದಗೆಟ್ಟಿದೆ. ಭದ್ರತೆಗೆ ಸಂಬಂಧಿಸಿದ ಇಸ್ರೇಲ್ ನ ಕಾನೂನುಬದ್ಧ ಅಧಿಕಾರವನ್ನು ನಾವು ಗುರುತಿಸುತ್ತೇವೆ. ಆದರೆ ಇದೇ ವೇಳೆ, ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆ ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿರಬೇಕು. ಎಲ್ಲಾ ಸಂದರ್ಭದಲ್ಲೂ ನಾಗರಿಕರನ್ನು ರಕ್ಷಿಸುವುದಕ್ಕೆ ಮಹತ್ವ ನೀಡಬೇಕು ಮತ್ತು ಮನೆಗಳು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಯಬಾರದು ಎಂದು ಗುಟೆರಸ್ ಆಗ್ರಹಿಸಿದ್ದಾರೆ.

ಗಾಝಾದಲ್ಲಿ ವೈದ್ಯಕೀಯ ಉಪಕರಣಗಳು, ಆಹಾರ ಮತ್ತು ಇಂಧನ ಹಾಗೂ ಇತರ ಮಾನವೀಯ ನೆರವಿನ ತುರ್ತು ಅಗತ್ಯವಿದೆ. ಜತೆಗೆ ಅಂತರಾಷ್ಟ್ರೀಯ ನೆರವು ವಿತರಿಸುವ ಕಾರ್ಯಕರ್ತರಿಗೆ ಮುಕ್ತ ಪ್ರವೇಶಾವಕಾಶ ಸಿಗಬೇಕು. ಫೆಲೆಸ್ತೀನಿಯರು ಮತ್ತು ಇಸ್ರೇಲಿಗಳ ಕಾನೂನುಬದ್ಧ ರಾಷ್ಟ್ರೀಯ ಆಕಾಂಕ್ಷೆಗಳನ್ನು ಪೂರೈಸುವ ಸಂಧಾನದಿಂದ ಮಾತ್ರ ಈ ಪ್ರದೇಶದ ಜನತೆಗೆ ದೀರ್ಘಾವಧಿಯ ಮತ್ತು ಶಾಶ್ವತ, ಸ್ಥಿರ ಶಾಂತಿಯನ್ನು ಒದಗಿಸಬಹುದು ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News