ಗಾಝಾದಲ್ಲಿ ಭೂಸೇನೆಯ ಆಕ್ರಮಣಕ್ಕೆ ಇಸ್ರೇಲ್ ಸಿದ್ಧತೆ
ಟೆಲ್ ಅವೀವ್: ಹಮಾಸ್ ವಿರುದ್ಧ ನಿರ್ಣಾಯಕ ಆಕ್ರಮಣ ತೀವ್ರಗೊಳಿಸಲು ನಿರ್ಧರಿಸಲಾಗಿದ್ದು ಗಾಝಾದಲ್ಲಿ ನೆಲದ ಮೇಲಿನ ಆಕ್ರಮಣಕ್ಕೆ ಸಜ್ಜುಗೊಂಡಿದ್ದೇವೆ. ಸರಕಾರದ ಸಮ್ಮತಿಗಾಗಿ ಕಾಯುತ್ತಿದ್ದೇವೆ ಎಂದು ಇಸ್ರೇಲ್ ನ ಭದ್ರತಾ ಪಡೆ ಗುರುವಾರ ಹೇಳಿದೆ.
ತುರ್ತು ಆಧಾರದ ಮೇಲೆ ರಚಿಸಲಾಗಿರುವ ಯುದ್ಧಕಾಲದ ಸಮ್ಮಿಶ್ರ ಸರಕಾರ ಯುದ್ಧದ ಮುಂದಿನ ದಾರಿಯನ್ನು ರೂಪಿಸಲಿದೆ. ಸರಕಾರ ನಿರ್ಧರಿಸಿದರೆ ನೆಲದ ಮೇಲಿನ ಆಕ್ರಮಣಕ್ಕೆ ತಕ್ಷಣ ಚಾಲನೆ ನೀಡಲಾಗುತ್ತದೆ ಎಂದು ಇಸ್ರೇಲ್ ಸೇನೆಯ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಚಿಟ್ ಮಾಹಿತಿ ನೀಡಿದ್ದಾರೆ. ಯುದ್ಧಕಾಲದ ಸಂಪುಟ ರಚನೆ, ಮೀಸಲು ಯೋಧರ ಒಟ್ಟುಗೂಡಿಸುವಿಕೆಯನ್ನು ಗಮನಿಸಿದರೆ ಗಾಝಾದಲ್ಲಿ ಇಸ್ರೇಲ್ ನಿಂದ ನೆಲದ ಮೇಲಿನ ದಾಳಿ ಖಚಿತ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಂಘರ್ಷಕ್ಕೆ ಸಂಬಂಧಿಸಿ ಗುರುವಾರದ ಕೆಲವು ಬೆಳವಣಿಗೆಗಳು ಹೀಗಿವೆ:
► ಗಾಝಾ ಪಟ್ಟಿಯ ಸಮೀಪದಲ್ಲಿ ಇಸ್ರೇಲ್ ನಿಂದ ಯೋಧರ ವಸತಿಗಾಗಿ ಸೇನಾ ನೆಲೆ ಸ್ಥಾಪನೆ.
► ಗಾಝಾ ಗಡಿಯತ್ತ ಮುಂದುವರಿಯುತ್ತಿರುವ ಇಸ್ರೇಲ್ ಟ್ಯಾಂಕ್ ಗಳು.
► ಗಾಝಾ ದಾಳಿಯ ಬಗ್ಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಚರ್ಚೆ.
► ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 1,300 ದಾಟಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲ್ ನ ಪ್ರತಿದಾಳಿಯಲ್ಲಿ 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 5000ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
► ಹಮಾಸ್ ಬೆಂಬಲಿಸುವ ಮೂಲಕ ಬೆಂಕಿಗೆ ತುಪ್ಪ ಸುರಿಯದಂತೆ ಇರಾನ್ ಗೆ ತಿಳಿಹೇಳಬೇಕೆಂದು ಚೀನಾದಲ್ಲಿನ ಇಸ್ರೇಲ್ ರಾಯಭಾರಿ ಚೀನಾವನ್ನು ಆಗ್ರಹಿಸಿದ್ದಾರೆ.
► ಇಸ್ರೇಲ್ ನ ಉತ್ತರದ ಗಡಿಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ಮುಂದುವರಿದಿದೆ.
► ಸಿರಿಯಾ ರಾಜಧಾನಿ ದಮಾಸ್ಕಸ್ನ ಪ್ರಧಾನ ವಿಮಾನ ನಿಲ್ದಾಣ ಮತ್ತು ಉತ್ತರದ ಅಲೆಪ್ಪೋ ನಗರದ ಮೇಲೆ ಇಸ್ರೇಲ್ ನಿಂದ ವೈಮಾನಿಕ ಕಾರ್ಯಾಚರಣೆ.
ಗಾಝಾದ ಪರಿಸ್ಥಿತಿ ಭೀಕರ: ವಿಶ್ವಸಂಸ್ಥೆ ಎಚ್ಚರಿಕೆ
ವಿಶ್ವಸಂಸ್ಥೆ: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ದಿಗ್ಬಂಧನದಿಂದಾಗಿ ಅಗತ್ಯದ ವಸ್ತುಗಳ ಪೂರೈಕೆ ಸ್ಥಗಿತಗೊಂಡಿದ್ದು ಭೀಕರ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್ಪಿ) ಗುರುವಾರ ಹೇಳಿದೆ.
ಗಾಝಾದಲ್ಲಿ ಆಹಾರ ವಸ್ತು, ಶುದ್ಧ ನೀರಿನ ಸೀಮಿತ ಸಂಗ್ರಹವಿದ್ದು ಕ್ಷಿಪ್ರವಾಗಿ ಬರಿದಾಗುತ್ತಿದೆ. ಈ ಸಮಸ್ಯೆಗೆ ತುರ್ತು ಪರಿಹಾರ ರೂಪಿಸಬೇಕು ಎಂದು ಡಬ್ಲ್ಯೂಎಫ್ಪಿಯ ತುರ್ತು ಸೇವಾ ವಿಭಾಗದ ಉಪಮುಖ್ಯಸ್ಥ ಬ್ರಿಯಾನ್ ಲ್ಯಾಂಡರ್ ಹೇಳಿದ್ದಾರೆ.