ಗಾಝಾ ಪಟ್ಟಿಯ 22 ಲಕ್ಷ ನಿವಾಸಿಗಳನ್ನು ಬಲವಂತದಿಂದ ಶಾಶ್ವತವಾಗಿ ಈಜಿಪ್ಟ್‌ಗೆ ವರ್ಗಾಯಿಸಲು ಮುಂದಾದ ಇಸ್ರೇಲ್: ವರದಿ

Update: 2023-11-01 13:42 GMT

Photo- PTI

ಹೊಸದಿಲ್ಲಿ: ಗಾಝಾ ಪಟ್ಟಿಯಲ್ಲಿನ 22 ಲಕ್ಷ ಫೆಲೆಸ್ತೀನಿಗಳನ್ನು ಬಲವಂತದಿಂದ ಶಾಶ್ವತವಾಗಿ ಈಜಿಪ್ಟ್‌ನ ಸಿನಾಯ್ ಪರ್ಯಾಯ ದ್ವೀಪಕ್ಕೆ ರವಾನಿಸಲು ಇಸ್ರೇಲಿ ಗುಪ್ತಚರ ಸಚಿವಾಲಯವು ಶಿಫಾರಸು ಮಾಡಿರುವುದನ್ನು ತೋರಿಸುವ ಅಧಿಕೃತ ದಾಖಲೆಯೊಂದನ್ನು ಇಸ್ರೇಲಿನ ಸುದ್ದಿ ಜಾಲತಾಣ ‘Local Call’ ಮೊದಲ ಬಾರಿಗೆ ಬಹಿರಂಗಗೊಳಿಸಿದೆ.

2023, ಅ.13ರ ದಿನಾಂಕವನ್ನು ಹೊಂದಿರುವ 10 ಪುಟಗಳ ಈ ಅಧಿಕೃತ ದಾಖಲೆಯು ಇಸ್ರೇಲಿ ಗುಪ್ತಚರ ಸಚಿವಾಲಯದ ಲಾಂಛನವನ್ನು ಒಳಗೊಂಡಿದೆ. ಈ ಸಚಿವಾಲಯವು ನೀತಿ ಸಂಶೋಧನೆಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಪ್ರಸ್ತಾವಗಳನ್ನು ಗುಪ್ತಚರ ಸಂಸ್ಥೆಗಳು, ಸೇನೆ ಮತ್ತು ಇತರ ಸಚಿವಾಲಯಗಳೊಂದಿಗೆ ಹಂಚಿಕೊಳ್ಳುತ್ತದೆ. ಪ್ರಸ್ತುತ ಯುದ್ಧದ ಹಿನ್ನೆಲೆಯಲ್ಲಿ ಗಾಝಾ ಪಟ್ಟಿಯಲ್ಲಿ ವಾಸವಾಗಿರುವ ಫೆಲೆಸ್ತೀನಿಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಮೂರು ಆಯ್ಕೆಗಳನ್ನು ಅದು ಪರಿಶೀಲಿಸಿದೆ ಮತ್ತು ತನ್ನ ಆದ್ಯತೆಯ ಕ್ರಮವಾಗಿ ಸಂಪೂರ್ಣ ಜನಸಂಖ್ಯೆಯ ವರ್ಗಾವಣೆಯನ್ನು ಶಿಫಾರಸು ಮಾಡಿದೆ. ಈ ಪ್ರಯತ್ನವನ್ನು ಬೆಂಬಲಿಸಲು ಅಂತರರಾಷ್ಟ್ರೀಯ ಸಮುದಾಯವನ್ನು ಕ್ರೋಡೀಕರಿಸುವಂತೆಯೂ ಅದು ಇಸ್ರೇಲ್ ಸರಕಾರಕ್ಕೆ ಕರೆ ನೀಡಿದೆ.

ದಾಖಲೆಯ ಅಸ್ತಿತ್ವವು ಇಸ್ರೇಲಿನ ರಕ್ಷಣಾ ವ್ಯವಸ್ಥೆಯು ಸಚಿವಾಲಯದ ಶಿಫಾರಸುಗಳನ್ನು ಪರಿಗಣಿಸುತ್ತಿದೆ ಎನ್ನುವುದನ್ನು ಸೂಚಿಸುವುದಿಲ್ಲ.

ಯುದ್ಧದ ಸಮಯದಲ್ಲಿ ಗಾಝಾ ಪಟ್ಟಿಯಲ್ಲಿನ ನಾಗರಿಕರನ್ನು ಸಿನಾಯ್‌ಗೆ ಸ್ಥಳಾಂತರಿಸಲು, ಅಲ್ಲಿ ಟೆಂಟ್ ಸಿಟಿಗಳನ್ನು ಸ್ಥಾಪಿಸಲು ಮತ್ತು ನಂತರ ಉಚ್ಚಾಟಿತ ನಾಗರಿಕರನ್ನು ನೆಲೆಗೊಳಿಸಲು ಉತ್ತರ ಸಿನಾಯ್‌ನಲ್ಲಿ ಇನ್ನಷ್ಟು ಕಾಯಂ ನಗರಗಳನ್ನು ಸ್ಥಾಪಿಸಲು ಕ್ರಮವನ್ನು ತೆಗೆದುಕೊಳ್ಳುವಂತೆ ಗುಪ್ತಚರ ಸಚಿವಾಲಯವು ಇಸ್ರೇಲ್ ಸರಕಾರಕ್ಕೆ ಶಿಫಾರಸು ಮಾಡಿದೆ. ಈಜಿಪ್ಟ್‌ನೊಳಗೆ ಹಲವಾರು ಕಿ.ಮೀ.ಗಳ ನಿರ್ಬಂಧಿತ ವಲಯವನ್ನು ಸೃಷ್ಟಿಸುವಂತೆ ಮತ್ತು ಈ ಜನರು ಇಸ್ರೇಲ್ ಗಡಿಗಳಿಗೆ ಸಮೀಪದಲ್ಲಿ ಚಟುವಟಿಕೆಗಳು/ನಿವಾಸಗಳಿಗೆ ಮರಳುವುದನ್ನು ತಡೆಯಬೇಕು. ಈ ಪ್ರಸ್ತಾವವನ್ನು ಜಾರಿಗೊಳಿಸಲು ವಿಶ್ವಸಂಸ್ಥೆಯ ನೇತೃತ್ವದಲ್ಲಿ ವಿಶ್ವಾದ್ಯಂತ ಸರಕಾರಗಳನ್ನು ಕ್ರೋಡೀಕರಿಸಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಯುದ್ಧದ ಅಪೇಕ್ಷಿತ ಫಲಿತಾಂಶವಾಗಿ ಫೆಲೆಸ್ತೀನಿ ನಾಗರಿಕರನ್ನು ಸ್ಥಳಾಂತರಿಸುವಂತೆ ದಾಖಲೆಯು ನಿಸ್ಸಂದಿಗ್ಧವಾಗಿ ಮತ್ತು ಸ್ಪಷ್ಟವಾಗಿ ಶಿಫಾರಸು ಮಾಡಿದೆ.

ಸ್ಥಳಾಂತರ ಯೋಜನೆಯನ್ನು ಹಲವಾರು ಹಂತಗಳಲ್ಲಿ ವಿಭಜಿಸಲಾಗಿದೆ. ಮೊದಲ ಹಂತದಲ್ಲಿ ಗಾಝಾದ ಜನಸಂಖ್ಯೆಯನ್ನು ದಕ್ಷಿಣ ಭಾಗಕ್ಕೆ ಸ್ಥಳಾಂತರಿಸಲು ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಇಸ್ರೇಲಿ ವಾಯುಪಡೆಗಳು ಉತ್ತರ ಗಾಝಾ ಪಟ್ಟಿಯ ಮೇಲೆ ದಾಳಿಗಳನ್ನು ಕೇಂದ್ರೀಕರಿಸುತ್ತವೆ. ಎರಡನೇ ಹಂತದಲ್ಲಿ ಗಾಝಾದಲ್ಲಿ ಭೂ ಆಕ್ರಮಣವು ಆರಂಭಗೊಳ್ಳುತ್ತದೆ ಮತ್ತು ಉತ್ತರದಿಂದ ದಕ್ಷಿಣದವರೆಗಿನ ಇಡೀ ಗಾಝಾ ಪಟ್ಟಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಹಮಾಸ್ ಹೋರಾಟಗಾರರ ಭೂಗತ ಬಂಕರ್‌ಗಳನ್ನು ನಾಶಗೊಳಿಸಲಾಗುತ್ತದೆ.

ಗಾಝಾದ ಮರುಆಕ್ರಮಣದೊಂದಿಗೆ ಏಕಕಾಲದಲ್ಲಿ ಫೆಲೆಸ್ತೀನಿ ನಾಗರಿಕರನ್ನು ಈಜಿಪ್ಟ್ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಮತ್ತು ಅವರಿಗೆ ಮರಳಲು ಅವಕಾಶ ನೀಡಲಾಗುವುದಿಲ್ಲ. ರಫಾದತ್ತ ನಾಗರಿಕರ ತೆರವುಗೊಳಿಸುವಿಕೆಯನ್ನು ಸಾಧ್ಯವಾಗಿಸಲು ದಕ್ಷಿಣಕ್ಕೆ ಪ್ರಯಾಣ ಮಾರ್ಗಗಳನ್ನು ಮುಕ್ತವಾಗಿರಿಸುವುದು ಮುಖ್ಯವಾಗಿದೆ ಎಂದು ದಾಖಲೆಯು ಹೇಳಿದೆ.

ಗುಪ್ತಚರ ಸಚಿವಾಲಯದ ಅಧಿಕಾರಿಯೋರ್ವರ ಪ್ರಕಾರ ಈ ಶಿಫಾರಸುಗಳ ಹಿಂದೆ ಸಚಿವಾಲಯದ ಸಿಬ್ಬಂದಿಗಳಿದ್ದಾರೆ. ಸಚಿವಾಲಯದ ಪ್ರಸ್ತಾವವು ಮಿಲಿಟರಿ ಗೂಢಚರ್ಯೆಯನ್ನು ಆಧರಿಸಿಲ್ಲ ಮತ್ತು ಸರಕಾರದೊಳಗೆ ಚರ್ಚೆಗೆ ಆಧಾರವಾಗಿ ಮಾತ್ರ ಕಾರ್ಯ ನಿರ್ವಹಿಸುತ್ತದೆ ಎಂದು ಬಲ್ಲ ಮೂಲಗಳು ಒತ್ತಿ ಹೇಳಿವೆ.

ಈ ಯೋಜನೆಯನ್ನು ಒಪ್ಪಿಕೊಳ್ಳುವಂತೆ ಗಾಝಾದಲ್ಲಿಯ ಫೆಲೆಸ್ತೀನಿ ನಾಗರಿಕರನ್ನು ಪ್ರೇರೇಪಿಸಲು ಮತ್ತು ಅವರು ತಮ್ಮ ನೆಲವನ್ನು ಬಿಟ್ಟುಕೊಡುವಂತೆ ಮಾಡಲು ಅವರನ್ನು ಗುರಿಯಾಗಿಸಿಕೊಂಡು ಅಭಿಯಾನವನ್ನು ದಾಖಲೆಯು ಉತ್ತೇಜಿಸುತ್ತದೆ. ಇಸ್ರೇಲ್ ಶೀಘ್ರದಲ್ಲಿಯೇ ಆಕ್ರಮಿಸಿಕೊಳ್ಳಲಿರುವ ಪ್ರದೇಶಗಳಿಗೆ ಅವರು ಮರಳುವ ಭರವಸೆಯಿಟ್ಟುಕೊಳ್ಳುವಂತಿಲ್ಲ ಎಂಬ ಸ್ಪಷ್ಟ ಸಂದೇಶವು ವಿಶ್ವಾದ್ಯಂತ ಹರಿದಾಡಬೇಕು. ಹಮಾಸ್ ನಾಯಕತ್ವದಿಂದಾಗಿ ನೀವು ನಿಮ್ಮ ಭೂಮಿಯನ್ನು ಕಳೆದುಕೊಳ್ಳುವಂತೆ ಅಲ್ಲಾಹು ಮಾಡಿದ್ದಾರೆ, ನಿಮ್ಮ ಮುಸ್ಲಿಂ ಸೋದರರ ನೆರವಿನೊಂದಿಗೆ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಬಿಟ್ಟರೆ ಬೇರೆ ಆಯ್ಕೆಯಿಲ್ಲ ಎನ್ನುವುದನ್ನು ಅವರಿಗೆ ಸ್ಪಷ್ಟಪಡಿಸಬೇಕು ಎಂದು ದಾಖಲೆಯಲ್ಲಿ ಹೇಳಲಾಗಿದೆ.

ಇದರ ಜೊತೆಗೆ ಇಸ್ರೇಲ್‌ನ್ನು ಪ್ರಚೋದಿಸದ ಅಥವಾ ದೂಷಿಸದ ರೀತಿಯಲ್ಲಿ ವರ್ಗಾವಣೆ ಯೋಜನೆಯನ್ನು ಉತ್ತೇಜಿಸಲು ಪಾಶ್ಚಾತ್ಯ ಜಗತ್ತಿನಲ್ಲಿ ಸಾರ್ವಜನಿಕ ಅಭಿಯಾನವೊಂದನ್ನು ಮುನ್ನಡೆಸುವಂತೆ ಸರಕಾರವನ್ನು ದಾಖಲೆಯು ಉತ್ತೇಜಸಿದೆ. ಗಾಝಾದಲ್ಲಿಯ ನಿವಾಸಿಗಳು ಅಲ್ಲಿಯೇ ಉಳಿದುಕೊಂಡರೆ ನಿರೀಕ್ಷಿತ ಸಾವುನೋವುಗಳಿಗೆ ಹೋಲಿಸಿದರೆ ಸ್ಥಳಾಂತರದಿಂದ ನಾಗರಿಕರ ಸಾವುನೋವುಗಳು ಅಲ್ಪವಾಗಿರುತ್ತವೆ ಎಂದು ಪ್ರತಿಪಾದಿಸುವ ಮೂಲಕ ಅಂತರರಾಷ್ಟ್ರೀಯ ಬೆಂಬಲವನ್ನು ಗೆದ್ದುಕೊಳ್ಳಲು ಗಾಝಾ ನಾಗರಿಕರ ಉಚ್ಚಾಟನೆಯು ಮಾನವೀಯ ಅಗತ್ಯವಾಗಿದೆ ಎಂದು ಮಂಡಿಸುವ ಮೂಲಕ ಇದನ್ನು ಮಾಡಬಹುದಾಗಿದೆ ಎಂದು ಸಲಹೆಯನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News