ಇಸ್ರೇಲ್ ಸೇನಾಪಡೆಯಿಂದ 4 ಒತ್ತೆಯಾಳುಗಳ ರಕ್ಷಣೆ: ವರದಿ
ಗಾಝಾ : ಕೇಂದ್ರ ಗಾಝಾಪಟ್ಟಿಯಲ್ಲಿ ಶನಿವಾರ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಹಮಾಸ್ನ ಒತ್ತೆಸೆರೆಯಲ್ಲಿದ್ದ ಯುವತಿ ಸಹಿತ 4 ಇಸ್ರೇಲಿ ಪ್ರಜೆಗಳನ್ನು ರಕ್ಷಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಕಳೆದ ವರ್ಷದ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ನ ಮೇಲೆ ದಾಳಿ ನಡೆಸಿದ್ದ ಹಮಾಸ್ ಇವರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಕೇಂದ್ರ ಗಾಝಾದ ನುಸೈರಾತ್ ಪ್ರದೇಶದಲ್ಲಿ ಹಮಾಸ್ನ ಎರಡು ನೆಲೆಗಳ ಮೇಲೆ ದಾಳಿ ನಡೆಸಿ ಒತ್ತೆಯಾಳುಗಳನ್ನು ರಕ್ಷಿಸಿರುವುದಾಗಿ ವರದಿಯಾಗಿದೆ.
ಈ ಮಧ್ಯೆ, ಉತ್ತರ ಗಾಝಾದಲ್ಲಿ ವಿಶ್ವಸಂಸ್ಥೆ ನಡೆಸುವ ಮತ್ತೊಂದು ಶಾಲೆಯ ಮೇಲೆ ಇಸ್ರೇಲ್ ಶುಕ್ರವಾರ ಬಾಂಬ್ ದಾಳಿ ನಡೆಸಿದ್ದು 3 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪ್ರತ್ಯೇಕ ಘಟನೆಗಳಲ್ಲಿ ಕೇಂದ್ರ ಗಾಝಾದಾದ್ಯಂತ ಇಸ್ರೇಲ್ ಪಡೆ ಶುಕ್ರವಾರವಿಡೀ ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ ಮಕ್ಕಳ ಸಹಿತ 28 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇಸ್ರೇಲ್ ಟ್ಯಾಂಕ್ಗಳು ಈಜಿಪ್ಟ್ನೊಂದಿಗಿನ ಗಾಝಾ ಗಡಿಪ್ರದೇಶದ ನಿಯಂತ್ರಣವನ್ನು ಪಡೆದಿದ್ದು ರಫಾ ನಗರದ ಪಶ್ಚಿಮ ಮತ್ತು ಕೇಂದ್ರ ಪ್ರದೇಶಗಳಲ್ಲಿ ದಾಳಿ ಮುಂದುವರಿಸಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.