ಇಸ್ರೇಲ್ | ಫೆಲೆಸ್ತೀನ್ ಪತ್ರಕರ್ತೆಗೆ 6 ತಿಂಗಳ ಜೈಲುಶಿಕ್ಷೆ , ದಂಡ

Update: 2024-11-18 14:42 GMT

ಫೆಲೆಸ್ತೀನ್ ಪತ್ರಕರ್ತೆ ರಾಶಾ ಹೆರ್ಜಲ್ಲಾ |  PC: arabnews

ಜೆರುಸಲೇಂ: ಫೆಲೆಸ್ತೀನ್ ಪತ್ರಕರ್ತೆ ರಾಶಾ ಹೆರ್ಜಲ್ಲಾ ಅವರಿಗೆ ಇಸ್ರೇಲ್ನ ಮಿಲಿಟರಿ ನ್ಯಾಯಾಲಯವು 6 ತಿಂಗಳ ಜೈಲುಶಿಕ್ಷೆ ಮತ್ತು 3,300 ಡಾಲರ್ ದಂಡ ವಿಧಿಸಿದೆ.

ಫೆಲೆಸ್ತೀನ್ ನ ಅಧಿಕೃತ ಸುದ್ದಿಸಂಸ್ಥೆ `ವಫಾ'ದಲ್ಲಿ ಕೆಲಸ ಮಾಡುತ್ತಿದ್ದ ರಶಾರನ್ನು ಜೂನ್ ನಲ್ಲಿ ಆಕ್ರಮಿತ ಪಶ್ಚಿಮದಂಡೆಯ ಉತ್ತರದಲ್ಲಿರುವ ಹುವಾರಾ ಬಂಧನ ಕೇಂದ್ರದಲ್ಲಿ ವಿಚಾರಣೆಗೆ ಹಾಜರಾಗಿದ್ದಾಗ ಬಂಧಿಸಲಾಗಿತ್ತು.

ಜೆನಿನ್ ಬಳಿಯ ಇಸ್ರೇಲಿ ಮಿಲಿಟರಿ ನೆಲೆಯಲ್ಲಿ `ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನೆ' ಆರೋಪವನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ತರುವ ಮೊದಲು ಆಕೆಯ ಬಂಧನವನ್ನು ಐದು ಬಾರಿ ವಿಸ್ತರಿಸಲಾಗಿತ್ತು. 2023ರಲ್ಲಿ ನಬ್ಲುಸ್ ನಗರದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭ ಇಸ್ರೇಲಿ ಪಡೆಗಳು ತಲೆಗೆ ಗುಂಡಿಕ್ಕಿ ಹತ್ಯೆಗೈದಿದ್ದ ಮುಹಮ್ಮದ್ ಹೆರ್ಜಲ್ಲಾನ ಸಹೋದರಿಯಾಗಿರುವ ರಶಾ(39 ವರ್ಷ) ಸೇರಿದಂತೆ 94 ಫೆಲೆಸ್ತೀನಿಯನ್ ಪತ್ರಕರ್ತರು ಪ್ರಸ್ತುತ ಇಸ್ರೇಲ್ ಜೈಲಿನಲ್ಲಿ ಬಂಧನದಲ್ಲಿದ್ದಾರೆ.

ಪಶ್ಚಿಮದಂಡೆಯ ಬಿರ್ಜೀಟ್ ವಿಶ್ವವಿದ್ಯಾಲಯದ ಮೂವರು ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ರೋಲಾ ಹಸನಿನ್, ಬುಶ್ರಾ ಅಲ್-ತವಿಲ್ ಮತ್ತು ಅಮಲ್ ಶುಜೈಯಾ ಅವರೂ ಇಸ್ರೇಲ್ ನಲ್ಲಿ ಬಂಧನದಲ್ಲಿರುವುದಾಗಿ ವಫಾ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News