ಫಿಲಿಪ್ಪೀನ್ಸ್ : ಚಂಡಮಾರುತದ ಅಬ್ಬರ; 6 ಲಕ್ಷ ಜನರ ಸ್ಥಳಾಂತರ

Update: 2024-11-17 18:07 GMT

ಮನಿಲಾ : ಫಿಲಿಪ್ಪೀನ್ಸ್ ಗೆ ಶನಿವಾರ ತಡರಾತ್ರಿ ಅಪ್ಪಳಿಸಿರುವ ಮ್ಯಾನ್-ಯಿ ಚಂಡಮಾರುತದಿಂದ ಹಲವು ಮರಗಳು ಉರುಳಿಬಿದ್ದು ರಸ್ತೆ ಸಂಚಾರ ಮತ್ತು ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುಮಾರು 6,50,000 ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಗಂಟೆಗೆ 185 ಕಿ.ಮೀ ವೇಗದ ಗಾಳಿಯೊಂದಿಗೆ ಕ್ಯಾಟಂಡುವನೆಸ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸಿದೆ. ತೀವ್ರ ಚಂಡಮಾರುತದ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ನೀಡಿದ್ದರಿಂದ ತಗ್ಗು ಪ್ರದೇಶದ ಬಹುತೇಕ ಜನರು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದು ಇದುವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಆದರೆ ಹಲವು ಮನೆಗಳ ಛಾವಣಿ ಹಾರಿಹೋಗಿದ್ದು ವ್ಯಾಪಕ ನಷ್ಟವಾಗಿದ್ದು ದ್ವೀಪದ ಎಲ್ಲಾ ನಗರಗಳಲ್ಲೂ ಹಾನಿ ಸಂಭವಿಸಿದೆ.

ಅರೋರ ಪ್ರಾಂತದ ದಿಪಾಕುಲಾವೊ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 2000 ಜನರನ್ನು ತುರ್ತು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಕರಾವಳಿ ರೆಸಾರ್ಟ್ ಗಳಿಂದ ಪ್ರವಾಸಿಗರನ್ನು ತೆರವುಗೊಳಿಸಲಾಗಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ಮುಖ್ಯಸ್ಥ ರೋಬರ್ಟೋ ಮೊಂಟೆರೊಲಾ ರವಿವಾರ ಹೇಳಿದ್ದಾರೆ.

ಫಿಲಿಪ್ಪೀನ್ಸ್ ನ ಅತ್ಯಂತ ಜನನಿಬಿಡ ದ್ವೀಪ ಲುಝಾನ್‍ ನತ್ತ ಚಂಡಮಾರುತ ಮುಂದುವರಿದಿದ್ದು ಧಾರಾಕಾರ ಮಳೆ, ತೀವ್ರ ಚಂಡಮಾರುತ ಹಾಗೂ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News