ಬೈರೂತ್ | ಇಸ್ರೇಲ್ ದಾಳಿಯಲ್ಲಿ 6 ಮಂದಿ ಮೃತ್ಯು ; ಶಾಲೆಗಳಿಗೆ ರಜೆ
ಬೈರೂತ್ : ಲೆಬನಾನ್ ರಾಜಧಾನಿ ಬೈರೂತ್ ಮೇಲೆ ರವಿವಾರ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ನ ದಾಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬೈರೂತ್ ನಲ್ಲಿ ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎರಡು ದಿನ ರಜೆ ಘೋಷಿಸಿ ಶಿಕ್ಷಣ ಇಲಾಖೆ ಆದೇಶ ಜಾರಿಗೊಳಿಸಿದೆ.
ಮಧ್ಯ ಲೆಬನಾನ್ ನ ಅತ್ಯಂತ ಜನನಿಬಿಡ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಮಾಧ್ಯಮ ವಕ್ತಾರ ಮುಹಮ್ಮದ್ ಅಫೀಫ್ ಸೇರಿದಂತೆ 6 ಮಂದಿ ಸಾವನ್ನಪ್ಪಿರುವುದಾಗಿ ಲೆಬನಾನ್ ಸರಕಾರ ಮತ್ತು ಇಸ್ರೇಲ್ ಮಿಲಿಟರಿ ಹೇಳಿದೆ.
ಬೈರೂತ್ ನ ಮಾರುಕಟ್ಟೆ ಪ್ರದೇಶಕ್ಕೆ ಮತ್ತೊಂದು ಕ್ಷಿಪಣಿ ಅಪ್ಪಳಿಸಿದ್ದು ಹಲವು ಅಂಗಡಿ ಹಾಗೂ ಕಟ್ಟಡಗಳಿಗೆ ಹರಡಿದ್ದ ಬೆಂಕಿಯನ್ನು ಸೋಮವಾರ ಬೆಳಿಗ್ಗೆ ನಿಯಂತ್ರಿಸಲಾಗಿದೆ. ಬೆಂಕಿಯಿಂದಾಗಿ ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸಿದ್ದ ಡೀಸೆಲ್ ಟ್ಯಾಂಕರ್ ಸ್ಫೋಟಗೊಂಡಿದೆ. ಸೋಮವಾರ ಬೆಳಗ್ಗಿನವರೆಗಿನ 36 ಗಂಟೆಗಳ ಅವಧಿಯಲ್ಲಿ ದಕ್ಷಿಣ ಲೆಬನಾನ್ ನಲ್ಲಿ ಹಿಜ್ಬುಲ್ಲಾಗಳ 200ಕ್ಕೂ ಅಧಿಕ ನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ದಕ್ಷಿಣ ಲೆಬನಾನ್ ನಲ್ಲಿ ಸೇನಾ ಕೇಂದ್ರವನ್ನು ನೇರವಾಗಿ ಗುರಿ ಇರಿಸಿಕೊಂಡು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿರುವುದಾಗಿ ಲೆಬನಾನ್ ಸೇನಾಪಡೆ ಹೇಳಿದೆ. ಈ ಮಧ್ಯೆ, ಸುಮಾರು 20 ಕ್ಷಿಪಣಿಗಳು ರವಿವಾರ ಲೆಬನಾನ್ ಗಡಿಯಾಚೆಗಿಂದ ಹಾರಿ ಬಂದಿದ್ದು ಇದರಲ್ಲಿ ಕೆಲವನ್ನು ತುಂಡರಿಸಲಾಗಿದೆ ಎಂದು ಇಸ್ರೇಲ್ ಸೋಮವಾರ ಹೇಳಿದೆ.