ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 7 ಮಂದಿ ಮೃತ್ಯು

PC : PTI
ಗಾಝಾ: ಮಧ್ಯ ಗಾಝಾದ ಡೀರ್ ಅಲ್-ಬಲಾಹ್ ನಲ್ಲಿ ಕಾರೊಂದನ್ನು ಗುರಿಯಾಗಿಸಿ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.
ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಪ್ರತ್ಯೇಕ ಘಟನೆಯಲ್ಲಿ, ರವಿವಾರ ಉತ್ತರ ಗಾಝಾದಲ್ಲಿನ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬಳಿಕ ಆಸ್ಪತ್ರೆಯ ರೋಗಿಗಳನ್ನು ಅನಿವಾರ್ಯವಾಗಿ ಸ್ಥಳಾಂತರಿಸಲಾಗಿದೆ. ಈ ಸಂದರ್ಭ ತುರ್ತು ವೈದ್ಯಕೀಯ ಸೇವೆ ಲಭಿಸದ ಕಾರಣ ಓರ್ವ ರೋಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿಗೂ ಮುನ್ನ ಎಚ್ಚರಿಕೆ ನೀಡಲಾಗಿತ್ತು. ದಾಳಿಯಿಂದ ತುರ್ತು ಚಿಕಿತ್ಸಾ ಕೊಠಡಿ, ಫಾರ್ಮಸಿ, ಪ್ರಯೋಗಾಲಯ ಹಾಗೂ ಸುತ್ತಮುತ್ತಲಿನ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಫದೆಲ್ ನಯೀಮ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿನ ಕೋಣೆಯೊಂದನ್ನು ಹಮಾಸ್ ನ ಕಮಾಂಡ್ ಹಾಗೂ ನಿಯಂತ್ರಣ ಕೊಠಡಿಯಾಗಿ ಬಳಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿಗೂ ಮುನ್ನ ನಾಗರಿಕರ ಸಾವು-ನೋವಿನ ಪ್ರಮಾಣವನ್ನು ಕನಿಷ್ಠಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು ಎಂದು ಇಸ್ರೇಲ್ ಹೇಳಿದೆ.