ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿಯ ಉಗ್ರಾಣಕ್ಕೆ ಬಡಿದ ರಷ್ಯನ್ ಕ್ಷಿಪಣಿ

PC: x.com/debanishachom
ಹೊಸದಿಲ್ಲಿ: ಉಕ್ರೇನ್ ಕುಸುಮ್ ಪ್ರದೇಶದಲ್ಲಿರುವ ಭಾರತೀಯ ಔಷಧ ತಯಾರಿಕಾ ಘಟಕದ ಉಗ್ರಾಣಕ್ಕೆ ಶನಿವಾರ ರಷ್ಯಾದ ಕ್ಷಿಪಣಿ ಅಪ್ಪಳಿಸಿದೆ ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಇದು ಉದ್ದೇಶಪೂರ್ವಕ ದಾಳಿ ಎಂದು ಉಕ್ರೇನ್ ಪ್ರತಿಪಾದಿಸಿದ್ದು, ಭಾರತದ ಜತೆ ವಿಶೇಷ ಸ್ನೇಹ ಇರುವುದಾಗಿ ಹೇಳಿಕೊಳ್ಳುತ್ತಿರುವ ವ್ಲಾದಿಮಿರ್ ಪುಟಿನ್ ನೇತೃತ್ವದ ರಷ್ಯನ್ ಸರ್ಕಾರ ಈ ದಾಳಿ ನಡೆಸಿದೆ ಎಂದು ಟೀಕಿಸಿದೆ.
"ಇಂದು ಉಕ್ರೇನ್ ನ ಕುಸುಮ್ ನಲ್ಲಿರುವ ಭಾರತೀಯ ಔಷಧ ಕಂಪನಿಯ ಉಗ್ರಾಣದ ಮೇಲೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದೆ" ಎಂದು ರಾಯಭಾರ ಕಚೇರಿ ಅಧಿಕೃತ ಹೇಳಿಕೆ ನೀಡಿದೆ.
ಭಾರತದ ಜತೆ ವಿಶೇಷ ಸ್ನೇಹ ಇದೆ ಎಂದು ಹೇಳಿಕೊಳ್ಳುತ್ತಿರುವ ಮಾಸ್ಕೊ, ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳ ಮೇಲೆ ದಾಳಿ ನಡೆಸಿ, ಮಕ್ಕಳು ಮತ್ತು ವೃದ್ಧರಿಗಾಗಿ ಇರುವ ಔಷಧಗಳನ್ನು ನಾಶಪಡಿಸಿದೆ ಎಂದು ವಿವರಿಸಿದೆ.
ಉಕ್ರೇನ್- ರಷ್ಯಾ ಸಂಘರ್ಷದ ವಿಚಾರದಲ್ಲಿ ಯುದ್ಧ ವಿರೋಧಿ ನಿಲುವನ್ನು ಭಾರತ ಸ್ಪಷ್ಟಪಡಿಸಿದ್ದು, ದೇಶ ಸದಾ ಶಾಂತಿಯ ಪರವಾಗಿರುತ್ತದೆ ಎಂದು ಹೇಳಿದೆ.