ಉಕ್ರೇನ್ ವಿದ್ಯುತ್ ಸ್ಥಾವರ ಗುರಿಯಾಗಿಸಿ ರಶ್ಯದ ಕ್ಷಿಪಣಿ ದಾಳಿ

Update: 2024-11-17 17:59 GMT

ಸಾಂದರ್ಭಿಕ ಚಿತ್ರ - PC : NDTV 

ಕೀವ್ : ಉಕ್ರೇನ್‍ ನ ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಿ ರವಿವಾರ ರಶ್ಯ ಬೃಹತ್ ಕ್ಷಿಪಣಿ ದಾಳಿ ನಡೆಸಿದ್ದು ರಾಜಧಾನಿ ಕೀವ್ ಹಾಗೂ ಇತರ ನಗರಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದ್ಯುತ್ ಮತ್ತು ಇಂಧನ ವ್ಯವಸ್ಥೆಗಳನ್ನು ಗುರಿಯಾಗಿಸಿದ ಮತ್ತೊಂದು ಸುತ್ತಿನ ದಾಳಿ ಮುಂದುವರಿದಿದೆ. ಶತ್ರುಗಳು ಉಕ್ರೇನ್‍ ನಾದ್ಯಂತ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಸೌಲಭ್ಯಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಉಕ್ರೇನ್‍ ನ ಇಂಧನ ಸಚಿವ ಜರ್ಮಾನ್ ಗಲುಷೆಂಕೊ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಶನಿವಾರ ತಡರಾತ್ರಿ ವಾಯು ರಕ್ಷಣಾ ವ್ಯವಸ್ಥೆಯು ಡ್ರೋನ್‍ಗಳನ್ನು ಪ್ರತಿಬಂಧಿಸುವ ಕಾರ್ಯ ನಡೆಸುತ್ತಿದ್ದಂತೆಯೇ ಹಲವು ನಗರಗಳಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬಳಿಕ ಹೆಚ್ಚಿನ ಅಪಾಯವನ್ನು ತಪ್ಪಿಸಲು ಕೀವ್ ಸೇರಿದಂತೆ ಹಲವು ನಗರಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ವಾಯವ್ಯ ಉಕ್ರೇನ್‍ ನ ವೊಲಿನ್ ಪ್ರಾಂತದಲ್ಲಿ ಇಂಧನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಕ್ಷಿಣದ ಮಿಕೊಲಾಯ್ ಪ್ರಾಂತದಲ್ಲಿ ಶನಿವಾರ ತಡರಾತ್ರಿಯ ಡ್ರೋನ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆಗ್ನೇಯ ನಗರವಾದ ಝಪೋರಿಝಿಯಾ ಮತ್ತು ಬಂದರು ನಗರ ಒಡೆಸಾದಲ್ಲಿಯೂ ಸ್ಫೋಟ ಸಂಭವಿಸಿದೆ. ದಕ್ಷಿಣದ ಕಿವಿರಿಹ್ ಮತ್ತು ಪಶ್ಚಿಮದ ರಿವೈನ್ ಪ್ರಾಂತಗಳಲ್ಲೂ ಸರಣಿ ಸ್ಫೋಟ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News