ದಕ್ಷಿಣ ಬೈರೂತ್ ಮೇಲೆ ಇಸ್ರೇಲ್ ದಾಳಿ, ವ್ಯಾಪಕ ಹಾನಿ
ಬೈರೂತ್: ಲೆಬನಾನ್ ರಾಜಧಾನಿ ಬೈರೂತ್‍ನ ದಕ್ಷಿಣದ ಉಪನಗರಗಳ ಮೇಲೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಇಸ್ರೇಲ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಎಂದು ಲೆಬನಾನ್‍ನ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ `ನ್ಯಾಷನಲ್ ನ್ಯೂಸ್ ಏಜೆನ್ಸಿ' ಶನಿವಾರ ವರದಿ ಮಾಡಿದೆ.
ಹಿಜ್ಬುಲ್ಲಾ ಭದ್ರಕೋಟೆ ಬೈರೂತ್ ಹಾಗೂ ಅಕ್ಕಪಕ್ಕದ ನಗರಗಳ ಮೇಲೆ ಮಂಗಳವಾರದಿಂದ ಇಸ್ರೇಲ್ ಬಾಂಬ್‍ದಾಳಿಯನ್ನು ತೀವ್ರಗೊಳಿಸಿದೆ. ಬೈರೂತ್‍ನ ಉಪನಗರ ಹರೆತ್ ಹರೆಕ್‍ನ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳುವಂತೆ ದಾಳಿಗೂ ಮುನ್ನ ಇಸ್ರೇಲ್ ಮಿಲಿಟರಿ ವಕ್ತಾರ ಅವಿಚಯ್ ಅದ್ರಾಯಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು. `ಶತ್ರುಗಳು ನಡೆಸಿದ ಮೂರು ಬಾಂಬ್ ದಾಳಿಗಳಲ್ಲಿ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು ಈ ಪ್ರದೇಶದಲ್ಲಿ ವ್ಯಾಪಕ ಹಾನಿಯಾಗಿದೆ' ಎಂದು ವರದಿ ಹೇಳಿದೆ.
ಶುಕ್ರವಾರ ಉತ್ತರ ಇಸ್ರೇಲ್‍ನಲ್ಲಿ ಪದಾತಿ ಪಡೆಯ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ಹಿಜ್ಬುಲ್ಲಾ ಗುಂಪು ಎರಡು ರಾಕೆಟ್‍ಗಳನ್ನು ಪ್ರಯೋಗಿಸಿರುವುದಾಗಿ ವರದಿಯಾಗಿದೆ.